499 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಕ್ಯಾಬಿನೇಟ್ ಒಪ್ಪಿಗೆ; ಮೆಡಿಕಲ್ ಕಾಲೇಜ್ ಕಾಮಗಾರಿಗೆ ವೇಗ; ಸಚಿವ ಶಿವಾನಂದ ಪಾಟೀಲ

Haveri Medical College
Published on

ಹಾವೇರಿ: ಇಲ್ಲಿನ ದೇವಗಿರಿ ಸಮೀಪದ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು 499 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಈಗಾಗಲೇ ಆಡಳಿತ ಭವನ ಎ ಮತ್ತು ಬಿ ಬ್ಲಾಕ್‌ಗಳು ಪೂಣಗೊಂಡಿವೆ. ಕಚೇರಿ ಮತ್ತು ಅನಾಟಮಿ ವಿಭಾಗಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಡೀನ್ ಇಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ಪದವಿ ತರಗತಿಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿವೆ. ಎರಡನೇ ವರ್ಷದ ತರಗತಿಗಳೂ ಶೀಘ್ರದಲ್ಲೇ ಆರಂಭವಾಗಲಿವೆ.
ನೂತನ ಕಟ್ಟಡದಲ್ಲಿ ಜಿಲ್ಲೆಯ ಎಲ್ಲ ನರ್ಸಿಂಗ್ ಕಾಲೇಜುಗಳ ಪರೀಕ್ಷೆಗಳು ಮತ್ತು ಮೊದಲ ಎಂಬಿಬಿಎಸ್ ಪದವಿ ಪರೀಕ್ಷೆಗಳನ್ನು ನಡೆಸಲಾಗಿದೆ. ಆಡಳಿತ ಭವನದವರೆಗೆ ಸಿಮೆಂಟ್ ರಸ್ತೆ ನಿಮಾಣ, ರಸ್ತೆ ವಿಭಜಕ ಮತ್ತು ವಿದ್ಯುದ್ದೀಪಗಳ ಕಾಮಗಾರಿ ಪೂರ್ಣಗೊಂಡಿದೆ. ಮುಖ್ಯ ರಸ್ತೆಯಿಂದ ಕಾಲೇಜು ಆವರಣದೊಳಗೆ ಎಲ್ಲ ಕಡೆ ಕಾಂಕ್ರೀಟ್ ರಸ್ತೆಗಳ ನಿಮಾಣ ಪೂರ್ಣಗೊಂಡಿದೆ. ಎಲ್ಲ ವಿಭಾಗಗಳನ್ನು ಶೀಘ್ರವಾಗಿ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ನಿರ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೇ.90ರಷ್ಟು ಕಾಮಗಾರಿ ಪೂರ್ಣ
ಹಾಸ್ಟೆಲ್ ಕಟ್ಟಡಗಳ ಕಾಮಗಾರಿ ಪ್ರತಿಶತ ಶೇ.95ರಷ್ಟು, ಲೆಕ್ಟರ್ ಹಾಲ್, ಸಿಬ್ಬಂದಿ, ನರ್ಸಿಂಗ್ ಮತ್ತು ಡಿ ಗ್ರೂಪ್ ನೌಕರರ ವಸತಿ ನಿಲಯ ಕಾಮಗಾರಿ ಪ್ರತಿಶತ ಶೇ.90ರಷ್ಟು ಪೂರ್ಣಗೊಂಡಿವೆ. ಆವರಣದಲ್ಲಿ ಲ್ಯಾಂಡ್ ಸ್ಕೇಪಿಂಗ್, ಪ್ಲಾಂಟೇಷನ್ ಮತ್ತು ಕಾಂಪೌಂಡ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವ ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net