ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿಯಲ್ಲಿ ಲೈಟಿಂಗ್; ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ವಿಶೇಷ ಅಲಂಕಾರ; ಹೆಸ್ಕಾಂ ಅಧ್ಯಕ್ಷ ಅಜೀಮಪೀರ್ ಖಾದ್ರಿ ಹೇಳಿಕೆ

20 HVR 2
Published on

ಹಾವೇರಿ: ಬೆಳಗಾವಿಯಲ್ಲಿ ಡಿ.26, 27ರಂದು ನಡೆಯಲಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿ ಮಹಾನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು ಎಂದು ಹೆಸ್ಕಾಂ ಅಧ್ಯಕ್ಷ ಅಜೀಮಪೀರ್ ಖಾದ್ರಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಮ್ಮ ಮುಖಂಡರ ಸೂಚನೆ ಮೇರೆಗೆ ಬೆಳಗಾವಿಯಾದ್ಯಂತ ದಸರಾ ಮಾದರಿ ಲೈಟಿಂಗ್ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಲಾಗಿದೆ. ಬೆಳಗಾವಿಯಲ್ಲೇ ಮೈಸೂರು ದಸರಾದ ವಾತಾವರಣ ಸೃಷ್ಟಿಯಾಗಲಿದೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ ಗಾಂಧಿ ಸೇರಿದಂತೆ ದೇಶದ, ನಾಡಿನ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ರೈತರು, ಸಾರ್ವಜನಿಕರಿಗೆ ಸ್ವಾಗತ ಕೋರುತ್ತೇನೆ. ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳ ಜನ ಇದನ್ನು ಕಣ್ತುಂಬಿಕೊಳ್ಳಬೇಕು ಎಂದು ಕೋರಿಕೊಂಡರು.

ಹಳೆಯ ವಿದ್ಯುತ್ ತಂತಿಗಳಿಂದ ಅವಘಡ ಸಂಭವಿಸುತ್ತಿದ್ದು, ಅವುಗಳ ಬದಲಾವಣೆ ಕುರಿತು ಅಂದಾಜು ವೆಚ್ಚ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಜೀವ ಬಹಳ ಮುಖ್ಯ. ಜನರು ಜಾಗರೂಕತೆಯಿಂದ ಇರಬೇಕು. ಇಂತಹ ಘಟನೆ ಆಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ನೀರಲಗಿ, ಪರಮೇಶ್ವರ ಎಣ್ಣಿ, ಇತರರಿದ್ದರು.

ಸೋಲಾರ್ ಪಂಪ್‌ಸೆಟ್ ಪರಿಶೀಲನೆ

ರೈತರಿಗೆ ಅಕ್ರಮ ಕೊಳವೆಬಾವಿ ಸಕ್ರಮ ಯೋಜನೆ ಬಂದ್ ಆಗಿದ್ದು, ಮತ್ತೆ ಪುನಾರಂಭಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಪರ್ಯಾಯವಾಗಿ ಸೋಲಾರ್ ಅಳವಡಿಕೆಗೆ ಇಲಾಖೆ ಒತ್ತು ನೀಡಿದೆ. ಕೇಂದ್ರದಿಂದ ಶೇ.30ರಷ್ಟು ಹಾಗೂ ರಾಜ್ಯದಿಂದ ಶೇ.50ರಷ್ಟು ಸಬ್ಸಿಡಿ ದೊರೆಯಲಿದ್ದು, ರೈತರು ಕೇವಲ ಶೇ.20ರಷ್ಟು ಮಾತ್ರ ಹಣ ಪಾವತಿಸಬೇಕಿದೆ. ಸೋಲಾರ್ ಅಳವಡಿಸಿದರೆ 8ರಿಂದ 12 ತಾಸು ನೀರು ಸಿಗುತ್ತದೆ. ಈಗಾಗಲೇ 749 ರೈತರಿಂದ ಅರ್ಜಿ ಬಂದಿವೆ. ಕೆಲ ರೈತರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ, ರೈತರ ಜಮೀನುಗಳಿಗೆ ಸ್ವತಃ ನಾನೇ ಹೋಗಿ ಪರಿಶೀಲಿಸುತ್ತೇನೆ. ಈ ಕುರಿತು ಜಾಗೃತಿ ಮೂಡಿಸುತ್ತೇನೆ. ಶೀಘ್ರದಲ್ಲೇ ಸಚಿವ ಕೆ.ಜೆ.ಜಾರ್ಜ್ ಅವರು ಹಾವೇರಿ ಜಿಲ್ಲೆಗೆ ಆಗಮಿಸಿ ವಿದ್ಯುತ್ ಯೋಜನೆಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ಖಾದ್ರಿ.

ಬಿಲ್ ಬಾಕಿಯಿಂದ ಸಾಲ

ಗೃಹಜ್ಯೋತಿ ಯೋಜನೆಯಲ್ಲಿ ಹೆಸ್ಕಾಂ ಶೇ.91.17ರಷ್ಟು ಗುರಿ ಸಾಧನೆ ಮಾಡಿದ್ದು, ಶೇ.100ರಷ್ಟು ತಲುಪಲು ಪ್ರಯತ್ನ ನಡೆಸಿದ್ದೇವೆ. ಹೆಸ್ಕಾಂ ರಾಜ್ಯಕ್ಕೆ ನಂಬರ್ ಒನ ಮಾಡುವುದು ನನ್ನ ಕನಸು. ಕೆಲ ನಗರಸಭೆಗಳು, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಿದ್ಯುತ್ ಬಿಲ್ ಬಾಕಿ ಇದೆ. ಇದರಿಂದಾಗಿ ಹೆಸ್ಕಾಂ ಸಾಲದಲ್ಲಿ ಸಿಲುಕಿದೆ. ಕಮರ್ಷಿಯಲ್ ಗ್ರಾಹಕರು ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸಿ ಕಂಪನಿಯಿಂದ ಉತ್ತಮ ಸೇವೆ ಪಡೆಯಬೇಕು ಎಂದು ಖಾದ್ರಿ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net