ಅಧಿಕಾರದಲ್ಲಿ ನಿಷ್ಠೆ, ನಿಷ್ಠುರತೆ ಮುಖ್ಯ; ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮಿಜಿ

31 HVR 5
Published on

ಹಾವೇರಿ: ನಿಷ್ಠೆ ಮತ್ತು ನಿಷ್ಠುರತೆಯಿಂದ ಅಧಿಕಾರವನ್ನು ಬಳಸಿಕೊಳ್ಳಬೇಕು. ಅಧಿಕಾರದಲ್ಲಿ ಜನಸಾಮಾನ್ಯರ ಹಿತ ಮುಖ್ಯವಾಗಿರಬೇಕು. ಈ ದಿಶೆಯಲ್ಲಿ ಕೆ.ಇ.ಬಿ. ಅಧಿಕಾರಿ ವಿಜಯಕುಮಾರ ಮುದಕಣ್ಣನವರ ಕಾರ್ಯ ವೈಖರಿ ಮಾದರಿಯಾಗಿದೆ ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಕಾರ್ಮಿಕ ಮುಖಂಡ, ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ವಿಜಯಕುಮಾರ ಮುದಕಣ್ಣನವರ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಗೆಳೆಯರ ಬಳಗ, ತಾಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತಿ ಕಲಾವಿದರ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಪರಿಪೂರ್ಣವಾಗಿ ನಿಭಾಯಿಸಿದ್ದ ಮುದಕಣ್ಣನವರ ತಂಡವನ್ನು ಕಸಾಪ ಸದಾಕಾಲ ಸ್ಮರಿಸುತ್ತದೆ ಎಂದರು.
ಸನ್ಮಾನವನ್ನು ಸ್ವೀಕರಿಸಿದ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಹಾವೇರಿಯ ನೆಲ ನನ್ನನ್ನು ಸದಾಕಾಲ ಪೋಷಿಸಿ ನಮ್ಮವನೇ ಎಂದು ಬೆಳೆಸಿದೆ. ನನಗೆ ಗೊತ್ತಿಲ್ಲದೆ ಮಾಡಿರಬಹುದಾದ ತಪ್ಪುಗಳನ್ನೂ ಕೂಡ ಮೌನವಾಗಿ ಮನ್ನಿಸಿದ್ದರಿಂದಲೇ ಬೆಳೆಯಲು ಸಾಧ್ಯವಾಯಿತು. ನಮ್ಮ ಜನರ ಋಣ ತೀರಿಸಲು ಸಾಧ್ಯವಾಗದು ಎಂದು ಭಾವುಕರಾದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪದ್ಮನಾಭ ಕುಂದಾಪೂರ ಮಾತನಾಡಿ, ಬೊಮ್ಮನಹಳ್ಳಿ ಎಂಬ ಚಿಕ್ಕ ಗ್ರಾಮದಲ್ಲಿ ಹುಟ್ಟಿ, ಬಡತನ ಮತ್ತು ಸಂಕಷ್ಟಗಳ ನಡುವ ಬೆಳೆದು ಜನಾನುರಾಗಿಯಾದ ವಿಜಯಕುಮಾರ ಅವರ ಸಾಧನೆ ಹೆಮ್ಮೆ ಮೂಡಿಸುತ್ತದೆ ಎಂದರು.
ಸಾಹಿತಿ ಸತೀಶ ಕುಲಕರ್ಣಿ, ಕಸಾಪ ತಾಲೂಕಾಧ್ಯಕ್ಷ ವೈ.ಬಿ ಆಲದಕಟ್ಟಿ, ಉದ್ಯಮಿ ಪ್ರಕಾಶ ಶೆಟ್ಟಿ, ಪರಿಮಳಾ ಜೈನ್, ಹಂಸಬಾವಿ ವಾರಂಬಳ್ಳಿ ಪ್ರತಿಷ್ಠಾನದ ಅಧ್ಯಕ್ಷ ವಿಶ್ವನಾಥ ವಾರಂಬಳ್ಳಿ, ಕವಿತಾ ಮುದಕಣ್ಣನವರ ಮಾತನಾಡಿದರು. ವ್ಹಿ.ಎಂ. ಪತ್ರಿ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ ಮರಿಗೂಳಪ್ಪನವರ ಪ್ರಾರ್ಥಿಸಿದರು. ಎಸ್.ಆರ್ ಹಿರೇಮಠ ಸ್ವಾಗತಿಸಿದರು. ಡಾ.ಗೀತಾ ಸುತ್ತಕೋಟಿ ನಿರೂಪಿಸಿದರು.ಪೃಥ್ವಿರಾಜ ಬೆಟಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net