ಏಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈಮನ್‌ಗಳ ನೇಮಕ; ಇಂಧನ ಕೆ.ಜೆ.ಜಾರ್ಜ್ ಹೇಳಿಕೆ

17 HVR 4
Published on

ಹಾವೇರಿ: ರಾಜ್ಯದಲ್ಲಿ ಖಾಲಿ ಇರುವ 3,000 ಸಾವಿರ ಲೈನ್‌ಮನ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಏಪ್ರಿಲ್ ಅಂತ್ಯದೊಳಗಾಗಿ ಪೂರ್ಣಗೊಳ್ಳಲಿದೆ. ಬಳಿಕ ಬಹುತೇಕ ಸಮಸ್ಯೆಗಳು ಬಗೆಹರಿಯಲಿವೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಭರವಸೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2.5 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿ ಮೂಲಸೌಕರ್ಯ ಒದಗಿಸಿದೆ. ಉಳಿದ ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಹೊಸದಾಗಿ ಬಂದ ಅಕ್ರಮ-ಸಕ್ರಮ ಅರ್ಜಿಗಳ ಕುರಿತು ನಂತರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಅಧಿಕ ಒತ್ತಡದಿಂದ ಟ್ರಾನ್ಸ್ ಫಾರ್ಮರ್‌ಗಳು ಸುಡುತ್ತಿವೆ. ಆದ್ದರಿಂದ ಅವುಗಳನ್ನು ಮೇಲ್ದರ್ಜೆಗೇರಿಸಬೇಕು. ಸುಟ್ಟು ಹೋದ ಟ್ರಾನ್‌ಫಾರ್ಮರ್‌ಗಳನ್ನು ತುರ್ತಾಗಿ ಬದಲಿಸಬೇಕು ಎಂದು ಮನವಿ ಮಾಡಿದರು.

ಹಿರೇಕೆರೂರು ಶಾಸಕ ಯು.ಬಿ ಬಣಕಾರ ಮಾತನಾಡಿ, ಕೃಷಿಪಂಪ್ ಸೆಟ್‌ಗಳಿಗೆ ದಿನದ ಏಳು ಗಂಟೆ ನಿರಂತರ ವಿದ್ಯುತ್ ಪೂರೈಸಬೇಕು. ಕೆಲವು ಕಡೆ ಹಳೆಯದಾಗಿರುವ ವಿದ್ಯುತ್ ಲೈನ್‌ಗಳನ್ನು ಬದಲಿಸಬೇಕು ಎಂದು ಮನವಿ ಮಾಡಿದರು. ಹಾವೇರಿ ಶಾಸಕ ರುದ್ರಪ್ಪ ಲಮಾಣಿ ನೆಗಳೂರಿನಲ್ಲಿ 110 ಕೆ.ವಿ. ಸಾಮರ್ಥ್ಯದ ಸ್ಟೆಷನ್ ಪ್ರಾರಂಭಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಎರಡು ದಿನಗಳಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರ ಅಹಾಲುಗಳನ್ನು ಆಲಿಸಿದ ಇಂಧನ ಸಚಿವ ಕೆ.ಜೆ ಜಾರ್ಜ್ ಪ್ರತಿಕ್ರಿಯಿಸಿ, ಈ ಎಲ್ಲ ವಿಚಾರಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶರಿಗೆ ಸೂಚಿಸಿದರು.

ಸಭೆಯಲ್ಲಿ ಬ್ಯಾಡಗಿ ಶಾಸಕ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಶಾಸಕರಾದ ಪ್ರಕಾಶ ಕೋಳಿವಾಡ, ಯಾಸಿರ್ ಅಹ್ಮದ್‌ಖಾನ್ ಪಠಾಣ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್., ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಸುಮ್ ಬಿ ಯೋಜನೆ ವರದಾನ

ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಸೋಲಾರ್ ಪಂಪ್‌ಸೆಟ್ ಒದಗಿಸುವ ಕುಸುಮ್-ಬಿ ಯೋಜನೆಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಸಬ್ಸಿಡಿಯನ್ನು ಶೇ.50ಕ್ಕೆ ಹೆಚ್ಚಿಸಿದ್ದು, ಕೇಂದ್ರ ಸರ್ಕಾರ ಶೇ.30ರಷ್ಟು ಸಬ್ಸಿಡಿ ನೀಡುತ್ತದೆ. ರೈತರು ಕೇವಲ ಶೇ.20ರಷ್ಟು ಮಾತ್ರ ಹಣ ಪಾವತಿಸಿ ಸೋಲಾರ್ ಪಂಪ್‌ಸೆಟ್ ಪಡೆಯಬಹುದು. ಈ ಯೋಜನ ರೈತರಿಗೆ ವರದಾನವಾಗಲಿದೆ ಎಂದು ಸಚಿವ ಜಾರ್ಜ್ ಹೇಳಿದರು.

ಕಾರ್ಖಾನೆ ಅಕ್ರಮ ಕರೆಂಟ್ ತನಿಖೆಗೆ ಆದೇಶ

ಭೈರನಪಾದ ಬಳಿಯ ಜಿಎಂ ಶುಗರ್ ಫ್ಯಾಕ್ಟರಿಯವರು ವಿದ್ಯುತ್ ಕಂಬಕ್ಕೆ ಕೊಕ್ಕೆ ಹಾಕಿ, ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದಾರೆ. ತುಮ್ಮಿನಕಟ್ಟಿ ಭಾಗದ ಹಲವೆಡೆ ವಿದ್ಯುತ್ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ ಎಂದು ರಾಣೆಬೆನ್ನೂರ ಶಾಸಕ ಕೆ.ಬಿ.ಕೋಳಿವಾಡ ಆರೋಪಿಸಿದರು. ಇಂತಹ ಗಂಭೀರ ಆರೋಪವಿದ್ದರೂ ಯಾಕೆ ಅಧಿಕಾರಿಗಳು ಗಮನಿಸಿಲ್ಲ ಎಂದು ಗರಂ ಸಚಿವರು ಆದರು. ಈ ಕುರಿತು ಸಮಗ್ರವಾಗಿ ತನಿಖೆ ನಡೆಸಿ, ವರದಿ ನೀಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದು ಸಾಬೀತಾದರೆ ಕ್ರಮ ಜರುಗಿಸಲಾಗುವುದು ಎಂದು ಜಾರ್ಜ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net