

ಹಾವೇರಿ: ಜಿಲ್ಲೆಯ ಚಿಕ್ಕಬಾಸೂರು ಹಾಗೂ ಕುಮ್ಮೂರು ಗ್ರಾಮದ ಕುಸುಮ್ ಬಿ ಯೋಜನೆಯ ಫಲಾನುಭವಿ ರೈತರ ಜಮೀನುಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಇತ್ತೀಚೆಗೆ ಭೇಟಿ ನೀಡಿ, ಪರಿಶೀಲಿಸಿದರು.
ಹೆಸ್ಕಾಂನ ಬ್ಯಾಡಗಿ ಉಪವಿಭಾಗದ ಕಾಗಿನೆಲೆ ಸೆಕ್ಷನ್ ವ್ಯಾಪ್ತಿಯ ಚಿಕ್ಕಬಸೂರ ಗ್ರಾಮದ ರುದ್ರಪ್ಪ ಬಡಿಗೇರ ಹಾಗೂ ಕುಮ್ಮೂರು ಗ್ರಾಮದ ರೈತ ರುದ್ರಯ್ಯ ಹಿರೇಮಠ ಅವರ ಜಮೀನಿನಲ್ಲಿ ಪಿಎಂ ಕುಸುಮ್ ಬಿ ಯೋಜನೆಯಡಿ 7.5 ಎಚ್.ಪಿ ಸಾಮರ್ಥ್ಯದ ಸೋಲಾರ್ ಪಂಪ್‌ಸೆಟ್ ಅಳವಡಿಸಲಾಗಿದೆ. ಈ ರೈತರ ಜಮೀನುಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸೋಲಾರ್ ಪಂಪ್‌ಸೆಟ್‌ಗಳ ಕಾರ್ಯ ನಿರ್ವಹಣೆ ವೀಕ್ಷಿಸಿದರು.
ರೈತರು ಸೋಲಾರ್ ಪಂಪ್‌ಸೆಟ್ ಮೂಲಕ ತಮ್ಮ ಬೆಳೆಗಳಿಗೆ ನೀರುಣಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಯೋಜನೆಯನ್ನು ರೈತರಿಗೆ ಯಶಸ್ವಿಯಾಗಿ ತಲುಪಿಸುತ್ತಿರುವ ಹೆಸ್ಕಾಂ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರು ಈ ಯೋಜನೆಯ ಲಾಭ ಪಡೆಯಲಿ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಾವೇರಿ ಎಸ್‌ಇ ನಾಗಪ್ಪ ಎಸ್.ಎಚ್, ರಾಣೆಬೆನ್ನೂರ ವಿಭಾಗದ ಇಇ ಪ್ರಭಾಕರ ಎಂ.ಎಸ್, ಬ್ಯಾಡಗಿ ಉಪವಿಭಾಗದ ಎಇಇ ರಾಜು, ಶಾಖಾಧಿಕಾರಿ ಮಾಗೋಡ, ಇತರರಿದ್ದರು.