ಹೆಗ್ಗೇರಿ ಕೆರೆಗೆ ಹರಿದ ಯುಟಿಪಿ ಕಾಲುವೆ ನೀರು; ರೈತರು, ಸ್ಥಳೀಯರಲ್ಲಿ ಮೂಡಿದ ಸಂತಸ; ಹಾವೇರಿಗೆ 24/7 ನೀರು ಪೂರೈಕೆ ಶೀಘ್ರ; ರುದ್ರಪ್ಪ ಲಮಾಣಿ

20 HVR 4 B
Published on

ಹಾವೇರಿ: ತುಂಗಾ ಮೇಲ್ದಂಡೆ ಯೋಜನೆ(ಯುಟಿಪಿ)ಯಡಿ ಕಾಲುವೆ ಮೂಲಕ ನಗರದ ಹೊರವಲಯದ ಹೆಗ್ಗೇರಿ ಕೆರೆಗೆ ನೀರು ಹರಿದು ಬರುತ್ತಿದ್ದು, ಸ್ಥಳೀಯ ರೈತರು, ಪರಿಸರ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.
690 ಎಕರೆ ವಿಸ್ತೀರ್ಣದ ಕೆರೆ ತುಂಬಲು ಕನಿಷ್ಠ ನಿರಂತರವಾಗಿ ಒಂದು ತಿಂಗಳ ಕಾಲ ಯುಟಿಪಿಯಿಂದ ನೀರು ಹರಿದು ಬರಬೇಕಿದೆ. ಕಳೆದ ವರ್ಷವೂ ಕೆರೆಗೆ ನೀರು ಹರಿಸಲಾಗಿತ್ತು. ಆದರೆ, ಕೆರೆಗೆ ಬೇಕಾಗುವಷ್ಟು ನೀರು ಹರಿದಿರಲಿಲ್ಲ. ಈ ವರ್ಷ ಕಾಲುವೆಯ ಹೂಳು ತೆಗೆಸಲಾಗಿದ್ದು, ಮಳೆಯ ಪ್ರಮಾಣವೂ ಹೆಚ್ಚಾಗಿರುವ ಕಾರಣ ಹೆಚ್ಚಿನ ಪ್ರಮಾಣ ನೀರನ್ನು ಕೆರೆಗೆ ಹರಿಸಲಾಗುತ್ತಿದೆ ಎಂದು ತಹಸೀಲ್ದಾರ್ ಜಿ.ಶಂಕರ ತಿಳಿಸಿದ್ದಾರೆ.
ಹಾವೇರಿಗೆ 24/7 ನೀರು ಪೂರೈಕೆ ಶೀಘ್ರ
ಹಾವೇರಿ ನಗರದ ಜನತೆಗೆ 24/7 ಕುಡಿಯುವ ನೀರು ಪೂರೈಕೆ ಕನಸು ಶೀಘ್ರದಲ್ಲೇ ನನಸಾಗಲಿದೆ. ಆದಷ್ಟು ಬೇಗನೇ 24/7 ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರುದ್ರಪ್ಪ ಲಮಾಣಿ ಭರವಸೆ ನೀಡಿದ್ದಾರೆ.
ಶನಿವಾರ ಹೆಗ್ಗೇರಿ ಕೆರೆಗೆ ಭೇಟಿ ನೀಡಿದ ಲಮಾಣಿ ತುಂಗಾ ಮೇಲ್ದಂಡೆ ಯೋಜನೆಯಡಿ ಹೆಗ್ಗೇರಿ ಕೆರೆಗೆ ನೀರು ಹರಿಸಿರುವುದನ್ನು ವೀಕ್ಷಣೆ ಮಾಡಿ ಮಾತನಾಡಿದರು. ಪ್ರಸ್ತುತವಾಗಿ ಉತ್ತಮ ಮಳೆಯಾಗುತ್ತಿದೆ. ಕೆಲ ದಿನಗಳಲ್ಲಿ ಕೆರೆ ತುಂಬಲಿದೆ. ಇದರಿಂದ ಅಂತರ್ಜಲ ಪ್ರಮಾಣ ಹೆಚ್ಚಳವಾಗಲಿದೆ. ಜನ-ಜಾನುವಾರುಗಳಿಗೆ ನೀರಿನ ಅನುಕೂಲವಾಗಲಿದೆ ಎಂದರು.
ನೀರಾವರಿ ಇಲಾಖೆ ಸಹಾಯಕ ಇಂಜನೀಯರ್ ರಾಮಕೃಷ್ಣ ಮಾತನಾಡಿ, ಅಕ್ಟೋಬರ್ ಅಂತ್ಯದವರೆಗೆ ತುಂಗಾ ಮೇಲ್ದಂಡೆ ಯೋಜನೆಯಡಿ ಕೆನಾಲ್‌ಗೆ ನೀರು ಬಿಡಲಾಗುವುದು. ಹೆಚ್ಚುವರಿ ನೀರನ್ನು ಹೆಗ್ಗೇರಿ ಕೆರೆಗೆ ಹರಿಸಲಾಗುವುದು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜೀಗೌಡ್ರ, ನಗರಸಭೆ ಸದಸ್ಯ ಗಣೇಶ ಬಿಷ್ಟಣ್ಣನವರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net