

ಹಾವೇರಿ: ಯಾಲಕ್ಕಿ ನಗರಿ ಜಿಲ್ಲಾಕೇಂದ್ರ ಹಾವೇರಿ ಶಹರ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಶನಿವಾರ ಸಂಜೆ ಭಾರೀ ಗುಡುಗು, ಗಾಳಿ ಸಹಿತ ರಭಸವಾದ ಮಳೆ ಸುರಿಯಿತು.
ಬೆಳಗ್ಗೆಯಿಂದ ಪ್ರಖರವಾದ ಬಿಸಿಲು, ಸೆಕೆಯ ವಾತಾವರಣ ಇತ್ತು. ಸಂಜೆಯಾಗುತ್ತಿದ್ದಂತೆ ಏಕಾಏಕಿ ವಾತಾವರಣ ಬದಾಯಿತು. ಮೊದಲು ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಏಕಾಏಕಿ ಬಿರುಗಾಳಿ ಸಹಿತ ಜೋರಾದ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದರಿಂದ ನಗರದ ಹಲವೆಡೆ ಮರದ ಟೊಂಗೆ, ವಿದ್ಯುತ್ ಕಂಬಗಳು ಧರೆಗೆ ಉರುಳಿದವು. ರಸ್ತೆ ತುಂಬ ನೀರು ನದಿಯಂತೆ ಹರಿಯಿತು. ಇದರಿಂದ ಕೆಲಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.
ರೈಲು ನಿಲ್ದಾಣದ ಎಪಿಎಂಸಿ ಮಾರುಕಟ್ಟೆ ಬಳಿ ವಿದ್ಯುತ್ ವೈರ್ ಮೇಲೆ ತಗಡು ಹಾರಿ ಬಿದ್ದಿತ್ತು. ನಗರದಾದ್ಯಂತ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಕ್ರೀಡಾಕೂಟಕ್ಕೆ ಅಡ್ಡಿ, ಪೆಂಡಾಲ್ ಧರೆಗೆ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ನೌಕರರ ಕ್ರೀಡಾಕೂಟಕ್ಕೆ ಮಳೆ ಅಡ್ಡಿಪಡಿಸಿತು. ಸಂಜೆ ಕ್ರೀಡಾಕೂಟ ಮುಕ್ತಾಯಗೊಳಿಸಿ ಸಮಾರೋಪ ಸಮಾರಂಭ ಆಯೋಜಿಸುವ ವೇಳೆ ಭಾರಿ ಮಳೆ, ಗಾಳಿಗೆ ವೇದಿಕೆ ಪೆಂಡಾಲ್ ಧರೆಗೆ ಉರುಳಿ, ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಮೈದಾನದ ತುಂಬ ನೀರು ತುಂಬಿಕೊಂಡಿತ್ತು. ಇದರಿಂದ ಸಮಾರೋಪ ಸಮಾರಂಭ ಮೊಟಕುಗೊಳಿಸಲಾಯಿತು.