24 ಗಂಟೆಗಳಲ್ಲಿ 32 ಮಿಮೀ ದಾಖಲೆ ಮಳೆ; ವಾಡಿಕೆಗಿಂತ ಹನ್ನೊಂದು ಪಟ್ಟು ಹೆಚ್ಚು ಸುರಿದ ವರುಣ; 24 ಮನೆಗಳಿಗೆ ಹಾನಿ

12 HVR 3 A
Published on

ಹಾವೇರಿ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 32 ಮಿಮೀ ದಾಖಲೆಯ ಮಳೆ ಸುರಿದಿದ್ದು, ವಾಡಿಕೆಗಿಂತ ಹನ್ನೊಂದು ಪಟ್ಟು ಅಂದರೆ ಶೇ.1,233ರಷ್ಟು ಮಳೆ ಸುರಿದಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.
ಗುರುವಾರ ಸುರಿದ ಮಳೆಗೆ ಒಂದೇ ದಿನಕ್ಕೆ 24 ಮನೆಗಳಿಗೆ ಹಾನಿ ಉಂಟಾಗಿದೆ. ಹಾವೇರ ನಗರದಲ್ಲಿ ಚರಂಡಿಯಲ್ಲಿ ಬಿದ್ದು ನಿವೇದನ ಗುಡಗೇರಿ (12) ಬಾಲಕ ಮೃತಪಟ್ಟಿದ್ದಾನೆ. ರಾಣೆಬೆನ್ನೂರ ತಾಲೂಕು ಮಣಕೂರ ಗ್ರಾಮದ ಗುಡ್ಡಪ್ಪ ಬಣಕಾರ ಎಂಬುವರ 2 ಕುರಿಗಳು ಮೃತಪಟ್ಟಿವೆ.
ಹಾವೇರಿ ತಾಲೂಕಲ್ಲಿ 280 ಹೆಕ್ಟೆರ್ ಮೆಕ್ಕೆಜೋಳ, 10 ಹೆಕ್ಟೆರ್ ಶೇಂಗಾ, 20 ಹೆಕ್ಟೇರ್ ಹತ್ತಿ ಹಾನಿಗೀಡಾಗಿದೆ. ಹಿರೇಕೆರೂರಲ್ಲಿ 8 ಹೆಕ್ಟೇರ್ ಮೆಕ್ಕೆಜೋಳ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ರೈತರು ಬೆಳೆ ಒಣಗಿಸಲು ರಸ್ತೆಬದಿ ಹಾಕಿದ್ದ ಬೆಳೆ ಮಳೆನೀರಿಗೆ ಕೊಚ್ಚಿಹೋಗಿದೆ. ಶೀಗಿ ಹುಣ್ಣಿಮೆ ಸಂಭ್ರಮಕ್ಕೂ ಮಳೆ ಅಡ್ಡಿಪಡಿಸಿದೆ.
ವಿವಿಧೆಡೆ ರಸ್ತೆ ಸಂಪರ್ಕ ಕಡಿತ
ಸವಣೂರ ತಾಲೂಕು ತಳ್ಳಳ್ಳಿಯಿಂದ ಹತ್ತಿಮತ್ತೂರ, ಹೂಲಿಹಳ್ಳಿ- ಜೋಯಿಸರಹಳ್ಳಿ, ಲಿಂಗದಹಳ್ಳಿ- ನಂದಿಹಳ್ಳಿ, ಕೂಡಲ- ನಾಗನೂರ, ಬಂಕಾಪುರ- ನಾರಾಯಣಪುರ, ಹಳೇಬಂಕಾಪುರ- ಹುಲಿಕಟ್ಟಿ ರಸ್ತೆ ಸಂಪರ್ಕ ಕಡಿತಗೊಂಡಿದೆ. 11 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net