

ಹಾವೇರಿ: ಜಿಲ್ಲೆಯ ಬ್ಯಾಡಗಿ ಹಾಗೂ ಮೋಟೆಬೆನ್ನೂರನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಬುಧವಾರ ವಿವಿಧೆಡೆ ದಾಳಿ ನಡೆಸಿ, ಅನಧಿಕೃತ ಕ್ಲಿನಿಕ್‌ಗಳಿಗೆ ಬೀಗ ಹಾಕಿದೆ.
ಬ್ಯಾಡಗಿ ತಾಲೂಕಿನ ಸ್ಕಂದ ಹೋಮಿಯೋಪಥಿ ಕ್ಲಿನಿಕ್ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ತಂಡದೊಂದಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಶಂಕ್ರಿಪುರ ಉಪಕೇಂದ್ರ ಮೋಟೆಬೆನ್ನೂರ (ಬಿ) ಈ ಆಆಸ್ಪತ್ರೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾಗಿ (ಸಿ.ಎಚ್.ಓ) ಸೇವೆ ಸಲ್ಲಿಸುತ್ತಿರುವ ಸತ್ಯಪ್ಪ ಬುಸಾಳಿ ನಿಗದಿತ ವೈದ್ಯಕೀಯ ವಿದ್ಯಾರ್ಹತೆ ಪಡೆಯದೇ ವೈದ್ಯ ವೃತ್ತಿ ನಡೆಸುತ್ತಿರುವುದು ಪತ್ತೆಯಾಗಿದೆ. ಬ್ಯಾಡಗಿ ತಾಲೂಕಿನ ವ್ಯಾಪ್ತಿಯಲ್ಲಿ ವೈದ್ಯಕೀಯ ವಿದ್ಯಾರ್ಹತೆಯನ್ನು ಹೊಂದಿದ್ದರೂ ಸಹ ಶಾರದಾ ಹಾಸ್ಪಿಟಲ್, ಶ್ರೀ ರೇಣುಕಾ ಕ್ಲಿನಿಕ್ ಎಂಬ ಹೆಸರಿನಲ್ಲಿ ಕೆ.ಪಿ.ಎಂ.ಇ ಕಾಯ್ದೆಯಡಿ ನೋಂದಣಿ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಸೀಜ್ ಮಾಡಲಾಗಿದೆ.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದೇವರಾಜ ಎಸ್., ಜಿಲ್ಲಾ ಆಯುಷ್ ಅಧಿಕಾರಿ ಡಾ.ಜಿ.ಸಿ ನಿಡಗುಂದಿ, ಸಹಾಯಕ ಔಷಧ ನಿಯಂತ್ರಕ ಸಂಗಣ್ಣ ಶಿಳ್ಳಿ ಹಾಗೂ ಬ್ಯಾಡಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಕಾಂತೇಶ ಭಜಂತ್ರಿ, ಇತರರು ತಂಡದಲ್ಲಿದ್ದರು.