

ಹಾವೇರಿ: ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಸರಿಯಾದ ವೇತನ ಸಿಗುತ್ತಿಲ್ಲ. ಹಾಗಾಗಿ, ಏಜೆನ್ಸಿಯಿಂದ ಸಂಬಳ ಪಾವತಿ ಕೈಬಿಟ್ಟು ನೇರ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಅಕ್ಷಯಗೌಡ ಒತ್ತಾಯಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಪಿಎಚ್‌ಸಿ, ಸಿಎಚ್‌ಸಿ, ಸೇರಿದಂತೆ ವಿವಿಧೆಡೆ 700ಕ್ಕೂ ಅಧಿಕ ಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯೊಂದರಲ್ಲೇ ಏಳೆಂಟು ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ಏಜೆನ್ಸಿಗಳು ನೌಕರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಕೆಲವರಿಗೆ ಮೂರು, ನಾಲ್ಕು ತಿಂಗಳಾದರೂ ಸಂಬಳ ಆಗಿಲ್ಲ ಎಂದರು.
ಪಿಎಫ್, ಇಎಸ್‌ಐ ಸೌಲಭ್ಯವನ್ನೂ ಸರಿಯಾಗಿ ನೀಡುತ್ತಿಲ್ಲ. ನ್ಯಾಯ ಕೇಳಲು ಹೋದರೆ ಏಜೆನ್ಸಿಯವರು ಕೆಲಸದಿಂದ ಹೊರಗೆ ಹಾಕುವ ಬೆದರಿಕೆ ಹಾಕುತ್ತಾರೆ. ಈ ಕುರಿತು ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಡಿಎಚ್‌ಒ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ರೂಪಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಖಜಾಂಚಿ ರವೀಶ ಬಿ., ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಡಿ.ಎಲ್., ಸಿದ್ದಪ್ಪ ಬಿ., ಈರಪ್ಪ ಎಂ., ಗುರುರಾಜ, ರಾಜಮ್ಮ, ಇತರರಿದ್ದರು.
ಆರ್ಡರ್ ಕಾಪಿಗೆ 15 ಸಾವಿರ ಲಂಚ
ಮಾಸೂರ ಪಿಎಚ್‌ಸಿಯಲ್ಲಿ ಆರ್ಡರ್ ಕಾಪಿ ಕೊಡಲು ಒಬ್ಬರಿಂದ 15 ಸಾವಿರ ರೂ. ಲಂಚ ಕೊಡಬೇಕೆಂದು ಡಿಮಾಂಡ್ ಮಾಡಿದ್ದಾರೆ. ದಾಖಲೆಯಲ್ಲಿ 15 ಸಾವಿರ ಸಂಬಳ ಇದ್ದರೆ, 15 ಸಾವಿರ ಖಾತೆಗೆ ಹಾಕಿ ನಂತರ ನಾಲ್ಕು ಸಾವಿರ ರೂ. ಪಡೆಯುತ್ತಿದ್ದಾರೆ ಎಂದು ಅಕ್ಷಯಗೌಡ ಆರೋಪಿಸಿದರು.