

ಹಾವೇರಿ: ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾವೆಮುಲ್)ದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಆಗಸ್ಟ್ 2, 2024ರಂದು ನಿಗದಿಪಡಿಸಿದ್ದ ಚುನಾವಣೆಯನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಧಾರವಾಡ ಹಾಲು ಒಕ್ಕೂಟದಿಂದ ಬೇರ್ಪಟ್ಟ ನಂತರ ಹಾವೆಮುಲ್‌ಗೆ ಮೊದಲ ಬಾರಿಗೆ ಚುನಾವಣೆ ನಡೆಸಲು ಏ.18ರಂದು ನಿಗದಿಯಾಗಿದ್ದ ಚುನಾವಣೆಯನ್ನು ನೀತಿಸಂಹಿತೆ ಕಾರಣಕ್ಕೆ ಮುಂದೂಡಲಾಗಿತ್ತು. ಇದೀಗ ಆಗಸ್ಟ್ 2ರಂದು ನಿಗಧಿಪಡಿಸಿದ್ದ ದಿನಾಂಕವನ್ನೂ ಮುಂದೂಡಿ ರಾಜ್ಯ ಸಹಕಾರ ಚುನಾವಣಾ ಪ್ರಾಧಿಕಾರ ಆದೇಶಿಸಿದೆ. ಸಹಕಾರ ಸಂಘಗಳ ನಿಯಮಾವಳಿಗಳು 1960 ನಿಯಮ 13- ಡಿ, (2), (2-ಎ) ಪ್ರಕಾರವೇ ಚುನಾವಣೆ ನಡೆಸಬೇಕು ಎಂದು ಆದೇಶಿಸಿರುವ ಕರ್ನಾಟಕ ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತರು ಮತ್ತೊಮ್ಮೆ ದಿನಾಂಕ ಮುಂದೂಡಿ ಆದೇಶ ಹೊರಡಿಸಿದ್ದಾರೆ.
ಅನರ್ಹ ಮತದಾರರಿಗೆ ನೋಟಿಸ್
ಐದು ವಾರ್ಷಿಕ ಸಭೆಗಳ ಪೈಕಿ ಮೂರು ಸಭೆಗಳಲ್ಲಿ ಭಾಗವಹಿಸಿದವರನ್ನು ಅರ್ಹ ಮತದಾರರು ಎಂದು ಪರಿಗಣಿಸಲಾಗುತ್ತದೆ. ಆದರೆ, ಅನರ್ಹ ಮತದಾರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುವ ಬಗ್ಗೆಯೂ ಉಲ್ಲೇಖವಿದೆ. ಧಾರವಾಡ ಒಕ್ಕೂಟದಿಂದ ಬೇರ್ಪಟ್ಟ ಹಾವೇರಿ ಹಾಲು ಒಕ್ಕೂಟದಲ್ಲಿ ಸುಮಾರು 100ಕ್ಕೂ ಅಧಿಕ ಅನರ್ಹರಿದ್ದಾರೆ ಎನ್ನಲಾಗಿದೆ. ಇವರಿಗೆ ನೋಟಿಸ್ ಕೊಟ್ಟು, ಉತ್ತರಿಸಲು ಕಾಲಾವಕಾಶ ನೀಡಲು ಅವಕಾಶವಿದೆ. ಚುನಾವಣಾಧಿಕಾರಿಯೂ ಆಗಿರುವ ಡಿಸಿ ಅವರು ಇವುಗಳ ವಿಚಾರಣೆ ನಡೆಸಿ, ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸಿದ ನಂತರವೇ ಚುನಾವಣೆ ದಿನಾಂಕ ನಿಗದಿಪಡಿಸಬೇಕಿದೆ ಎನ್ನುತ್ತವೆ ಒಕ್ಕೂಟದ ಮೂಲಗಳು.