ಹಾಲು ಉತ್ಪಾದಕರಿಗೆ ಕೇವಲ ಎಂಟಾಣೆ !; 3.50 ರೂ. ಕಡಿತಗೊಳಿಸಿ, ನಂತರ 4 ರೂ. ಹೆಚ್ಚಳ; ನಷ್ಟದ ಹಿನ್ನೆಲೆ ಅಡ್ಡದಾರಿ ಹಿಡಿದ ಹಾವೇರಿ ಹಾಲು ಒಕ್ಕೂಟ

KMF Havemul Milk price story
Published on

ಕೇಶವಮೂರ್ತಿ ವಿ.ಬಿ. ಹಾವೇರಿ

‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ’ ಎನ್ನುವಂತೆ ಹಾವೇರಿ ಹಾಲು ಒಕ್ಕೂಟ ತನ್ನ ನಷ್ಟದ ಹೊರೆ ತಗ್ಗಿಸಲು ನಾನಾ ಕಸರತ್ತು ನಡೆಸಿದ್ದು, ‘ಹಾಲಿನ ದರ ಹೆಚ್ಚಳದ ನಾಲ್ಕು ರೂ.ಯನ್ನು ನೇರವಾಗಿ ಹಾಲು ಉತ್ಪಾದಕರಿಗೆ ಕೊಡಬೇಕು’ ಎಂಬ ರಾಜ್ಯ ಸರ್ಕಾರದ ಆದೇಶದ ನಡುವೆಯೂ ಅಡ್ಡ ದಾರಿ ಮೂಲಕ ನಾಲ್ಕು ರೂ. ಬದಲು ಕೇವಲ ಎಂಟಾಣೆ ಲಾಭ ನೀಡುತ್ತಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಏ.1ರಿಂದಲೇ ಹಾಲಿನ ದರವನ್ನು 4 ರೂ.ಗೆ ಹೆಚ್ಚಳ ಮಾಡಿ, ಆ ಹೆಚ್ಚಿನ ದರವನ್ನು ರೈತರಿಗೆ ಕೊಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಹೇಳಿಕೊಂಡಿದ್ದರು.

ಹಾಲಿನ ದರ ಹೆಚ್ಚಳದ ಖುಷಿಯಲ್ಲಿದ್ದ ಹಾಲು ಉತ್ಪಾದಕರ ಸಂತಸಕ್ಕೆ ತಣ್ಣೀರು ಎರಚಲೆಂದು ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾವೆಮುಲ್) ಮಾ.28ರಿಂದ ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ 3.50 ರೂ. ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಮಾ.21ರಂದು ನಡೆದ ಒಕ್ಕೂಟದ 25ನೇ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಮಾ.28ರಿಂದಲೇ ಅನ್ವಯ ಆಗುತ್ತದೆ ಎಂದು ಆದೇಶಿಸಿದೆ.

ಬಳಿಕ ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶನದಂತೆ ಮಾ.28ರಂದು ಜರುಗಿದ ಒಕ್ಕೂಟದ 26ನೇ ಆಡಳಿತ ಮಂಡಳಿ ಸಭೆಯ ನಿರ್ಣಯದಂತೆ ಹಾಲಿನ ದರ ಹೆಚ್ಚಳದ ನಾಲ್ಕು ರೂ.ಯನ್ನು ಏ.1ರಿಂದ ಸಂಪೂರ್ಣವಾಗಿ ಹಾಲು ಉತ್ಪಾದಕರಿಗೆ ವರ್ಗಾಯಿಸಲಾಗುವುದು ಎಂದು ಒಕ್ಕೂಟ ಮಾ.29ರಂದು ಆದೇಶ ಹೊರಡಿಸಿದೆ. ಈ ಎರಡೂ ಆದೇಶಕ್ಕೂ ಮೊದಲು ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 30.50 ರೂ. ಸಿಗುತ್ತಿತ್ತು. ಈ ಆದೇಶಗಳ ಬಳಿಕ ಕೇವಲ 31 ರೂ. ಸಿಗುತ್ತಿದೆ.

ಹೀಗೆ ಸರ್ಕಾರದ ಆದೇಶ ಬರುತ್ತಿದ್ದಂತೆ ತನಗೆ ಬೇಕಾದ ರೀತಿಯಲ್ಲಿ ಆದೇಶಗಳನ್ನು ಹೊರಡಿಸುತ್ತ ಹೈನುಗಾರರಿಗೆ ಬರೆ ಎಳೆಯುವ ಕೆಲಸಕ್ಕೆ ಒಕ್ಕೂಟ ಮುಂದಾಗಿದೆ. ಈ ಕೂಡಲೇ ಈ ಆದೇಶ ಹಿಂಪಡೆದು, ಕನಿಷ್ಠ 34 ರೂ. ದರ ನಿಗಧಿಪಡಿಸಬೇಕು ಎಂಬ ಒತ್ತಾಯ ಜಿಲ್ಲೆಯ ಹಾಲು ಉತ್ಪಾದಕರಿಂದ ಕೇಳಿ ಬರುತ್ತಿದೆ.

20 ಕೋಟಿ ರೂ. ನಷ್ಟದಲ್ಲಿ ಹಾವೆಮುಲ್

ಹಾವೆಮುಲ್ ಪ್ರತಿದಿನ 1 ಲಕ್ಷ 35 ಸಾವಿರ ಲೀ. ಹಾಲು ಉತ್ಪಾದಿಸುತ್ತಿದೆ. ಆದರೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಲ್ಲದಿರುವುದು ಹಾಗೂ ದುಂದುವೆಚ್ಚ, ವಿವಿಧ ವಿಭಾಗಗಳಲ್ಲಿ ಹಣಕಾಸಿನ ಸೋರಿಕೆ, ಮತ್ತಿತರ ಕಾರಣಕ್ಕೆ 20 ಕೋಟಿ ರೂ. ನಷ್ಟದಲ್ಲಿದೆ. ಈ ನಷ್ಟದ ಹೊರೆ ಒಕ್ಕೂಟದ ಮೇಲೆ ಇದೆ. ಇದೇ ಕಾರಣಕ್ಕೆ ನೂತನ ಆಡಳಿತ ಮಂಡಳಿ 3.50 ರೂ. ಕಡಿತಗೊಳಿಸಿದೆ. ಇದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.

ಆಡಳಿತ ಮಂಡಳಿ ಸಭೆ 4ರಂದು

ಹಾಲು ಉತ್ಪಾದಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹಾಲಿನ ದರ ಕಡಿತದ ಕುರಿತು ಚರ್ಚಿಸಲು ಒಕ್ಕೂಟ ಏ.4ರಂದು ಆಡಳಿತ ಮಂಡಳಿ ಸಭೆ ಕರೆದಿದೆ. ಈ ಸಭೆಯಲ್ಲಿ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ.

ಕೋಟ್: 

ನಿತ್ಯವೂ 1 ಲಕ್ಷ 35 ಸಾವಿರ ಲೀ. ಹಾಲು ಸಂಗ್ರಹಣೆಯಾಗುತ್ತಿದೆ. ಆದರೆ, ನೇರವಾಗಿ ಮಾರುಕಟ್ಟೆಯಲ್ಲಿ 20 ಸಾವಿರ ಲೀ. ಮಾತ್ರ ಮಾರಾಟವಾಗುತ್ತಿದೆ. 4 ರೂ. ಹೆಚ್ಚಿನ ದರ 20 ಸಾವಿರ ಲೀ.ಗೆ ಮಾತ್ರ ಸಿಗುತ್ತದೆ. ಉಳಿದ ಹಾಲು ಹಾಲಿನ ಪೌಡರ್, ಮತ್ತಿತರ ಬಳಕೆಗೆ ಹೋಗುತ್ತದೆ. ಈಗಾಗಲೇ ಒಕ್ಕೂಟ 20 ಕೋಟಿ ರೂ. ನಷ್ಟದಲ್ಲಿದೆ. ಹಾಗಾಗಿ, ದರ ಕಡಿತಗೊಳಿಸಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು.

- ಮಂಜನಗೌಡ ಪಾಟೀಲ, ಅಧ್ಯಕ್ಷ, ಹಾವೇರಿ ಹಾಲು ಒಕ್ಕೂಟ

ಕೋಟ್:  

ಗ್ರಾಹಕರಿಗೆ ಹೆಚ್ಚಿಸಿ, ರೈತರಿಗೆ 4 ರೂ. ಕೊಡುವುದಾಗಿ ಸರ್ಕಾರ ಹೇಳುತ್ತಿದೆ. ಒಕ್ಕೂಟದವರು ರೇಟ್ ಹೆಚ್ಚಳ ಆಗುತ್ತಿದ್ದಂತೆ 3.50 ಕಡಿಮೆ ಮಾಡಿ, 4 ರೂ. ಹೆಚ್ಚಳ ಮಾಡಿದ್ದಾರೆ. ಈ ಮೂಲಕ ರೈತರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. 20 ಕೋಟಿ ರೂ. ನಷ್ಟ ಆಗಿದ್ದು ಯಾಕೆ ಅಧ್ಯಯನ ಮಾಡಲಿ. ನಷ್ಟದ ಹೊರೆ ರೈತರ ಮೇಲೆ ಹೊರಿಸುವುದು ಯಾಕೆ ?

- ಶಿವಯೋಗಿ ಹೊಸಗೌಡ್ರ, ಹಾಲು ಉತ್ಪಾದಕ, ತೋಟದ ಯಲ್ಲಾಪುರ

ಪ್ರಸ್ತುತ ಹಾಲಿನ ದರ

(ಉತ್ಪಾದಕರಿಗೆ ನೀಡುವ ದರ)

ಆಕಳ ಹಾಲು 31 ರೂ.

ಎಮ್ಮೆ ಹಾಲು 43.50 ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net