ಮಾರಾಟ ವ್ಯವಸ್ಥೆಗೆ ಬಲ, ನಷ್ಟ ಸರಿದೂಗಿಸಲು ಕ್ರಮ; ದರ ಹೆಚ್ಚಳ ಕುರಿತು ಚರ್ಚೆ; ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ

2 HVR 5
Published on

ಹಾವೇರಿ: ಹಾವೇರಿ ಹಾಲು ಒಕ್ಕೂಟ ಸದ್ಯ 20 ಕೋಟಿ ರೂ. ನಷ್ಟದಲ್ಲಿ ನಡೆಯುತ್ತಿದೆ. ಹಾಗಾಗಿ, ಹೈನುಗಾರರ ಹಾಲಿನ ದರ 3.50 ರೂ. ಕಡಿತಗೊಳಿಸಲಾಗಿದೆ. ಒಕ್ಕೂಟದ ಮಾರಾಟ ವ್ಯವಸ್ಥೆ ಬಲಗೊಳಿಸಲಾಗುತ್ತಿದ್ದು, ರೈತರು ಸಹಕರಿಸಬೇಕು. ಸ್ವಲ್ಪ ದಿನಗಳ ಕಾಲಾವಕಾಶ ನೀಡಬೇಕು ಎಂದು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾವೆಮುಲ್) ಅಧ್ಯಕ್ಷ ಮಂಜನಗೌಡ ಪಾಟೀಲ ಮನವಿ ಮಾಡಿದರು.

ನಗರದ ಹಾವೆಮುಲ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಲಾಭದಲ್ಲಿ ಇದ್ದಾಗ ಲೀ.ಗೆ 35 ರೂ.ವರೆಗೆ ಹಾಲು ಉತ್ಪಾದಕರಿಗೆ ಕೊಡಲಾಗಿದೆ. ಈಗ ನಷ್ಟದಲ್ಲಿ ಇರುವ ಕಾರಣ ಕಡಿತಗೊಳಿಸಲಾಗಿದೆ. ಹೈನುಗಾರರಿಗೆ ನೀಡುವ ಹಾಲಿನ ದರ ಹೆಚ್ಚಿಸುವ ಕುರಿತು ಒತ್ತಡ ಬಂದ ಹಿನ್ನೆಲೆಯಲ್ಲಿ ನಾಲ್ಕು ದಿನದೊಳಗೆ ಆಡಳಿತ ಮಂಡಳಿ ಸಭೆ ನಡೆಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಹೊಸ ಆಡಳಿತ ಮಂಡಳಿ ಒಕ್ಕೂಟದಲ್ಲಿ ಅಧಿಕಾರಕ್ಕೆ ಬಂದು ಕೇವಲ 12 ದಿನ ಆಗಿದೆ. ಒಕ್ಕೂಟದ ಬಗ್ಗೆ ಇನ್ನೂ ಎಲ್ಲ ಮಾಹಿತಿ ಪಡೆಯಲಾಗುತ್ತಿದೆ. ಇಕ್ಕಟ್ಟಿನ ಸ್ಥಿತಿಯಲ್ಲಿ ಇದ್ದೇವೆ. ನಷ್ಟಕ್ಕೆ ಹಲವು ಕಾರಣಗಳಿವೆ. ಒಕ್ಕೂಟಕ್ಕೆ ನಿತ್ಯ 1.35 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದೆ. ಕೇವಲ 20 ಸಾವಿರ ಲೀ ಸ್ಥಳೀಯವಾಗಿ ಲಿಕ್ವಿಡ್ ರೂಪದಲ್ಲಿ ಮಾರಾಟವಾಗುತ್ತಿದೆ. 20 ಸಾವಿರ ಲೀ.ಗೆ ಮಾತ್ರ ಹೆಚ್ಚುವರಿ 4 ರೂ. ಸಿಗುತ್ತದೆ. ಉಳಿದ 1.15 ಲಕ್ಷ ಲೀ. ಹಾಲಿನ ಪುಡಿ, ಶಾಲೆಗೆ ಹಾಲು ಸರಬರಾಜು, ಇತರೆ ಉತ್ಪನ್ನ ಮಾರಾಟಕ್ಕೆ ಕಳುಹಿಸುತ್ತೇವೆ ಎಂದರು.

ಹುಬ್ಬಳ್ಳಿ ನಗರ ಹಾಗೂ ಹೊರ ರಾಜ್ಯಕ್ಕೆ ಹಾಲು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮಂಡಳಿಗೆ ಪತ್ರ ಬರೆದಿದ್ದೇವೆ. ಜಿಲ್ಲೆಯ ನಗರ ಸೇರಿ ಎಲ್ಲೆಲ್ಲಿ ಸಾಧ್ಯವೋ ನಂದಿನಿ ಪಾರ್ಲರ್ ಆರಂಭಿಸಲಾಗುವುದು. ಒಕ್ಕೂಟದಲ್ಲಿ ನೇಮಕಾತಿ ಕುರಿತು ಪರಿಶೀಲಿಸಲಾಗುವುದು. ಹೆಚ್ಚುವರಿ ನೇಮಕಾತಿ ಇದ್ದಲ್ಲಿ ಕಡಿತಗೊಳಿಸಲಾಗುವುದು. ಹಾಲು ಪಡೆಯುವಾಗ ಪರಿಶೀಲಿಸಿ, ಗುಣಮಟ್ಟದ ಹಾಲು ಮಾತ್ರ ಪಡೆಯಲು ಸೂಚಿಸಲಾಗುವುದು. ಹೈನುಗಾರರ ಸ್ವಲ್ಪ ಕಾಲಾವಕಾಶ ಕೊಡಿ. ಮತ್ತೆ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ನಿರ್ದೇಶಕರಾದ ಚಂದ್ರಪ್ಪ ಜಾಲಗಾರ, ಎ.ಕೆ ಪಾಟೀಲ, ಬಸವೇಶಗೌಡ ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಶಂಕರಗೌಡ ಪಾಟೀಲ, ಎಂಡಿ ಎಚ್.ಟಿ ಅಶೋಕಗೌಡ, ಮಾರುಕಟ್ಟೆ ಮ್ಯಾನೇಜರ್ ವೇದಮೂರ್ತಿ, ಇತರರಿದ್ದರು.

ಯುಎಚ್‌ಟಿ ಘಟಕ ಹೊರೆ

ತಾಲೂಕಿನ ಜಂಗಮನಕೊಪ್ಪದ ನಂದಿನಿ ಯುಎಚ್‌ಟಿ ಘಟಕ ಆರಂಭವಾದ ಬಳಿಕ ಹಾವೆಮುಲ್ ನಷ್ಟ ಉಂಟಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಪ್ಲಾಂಟ್‌ಗೆ ನಿತ್ಯವೂ ಒಕ್ಕೂಟದಿಂದ 75 ಸಾವಿರ ಲೀ. ಹಾಲು ಕೊಡಬೇಕು. ಇದರಿಂದ 1 ಲೀ.ಗೆ 4.50 ರೂ. ನಷ್ಟ ಆಗುತ್ತದೆ. ಕೊಡದಿದ್ದರೆ ಲೀ.ಗೆ 2 ರೂ. ದಂಡ. ವಿಧಿಸಲಾಗುತ್ತದೆ. ಹಾಗಾಗಿ, ಈ ಯುಎಚ್‌ಟಿ ಘಟಕವನ್ನು ನೇರವಾಗಿ ಕೆಎಂಎಫ್‌ನಿಂದ ನಿರ್ವಹಣೆ ಮಾಡುವ ಕುರಿತು ಮಹಾಮಂಡಳಿಗೆ ಪತ್ರ ಬರೆಯಲಾಗಿದೆ ಎಂದು ಮಂಜನಗೌಡ ಪಾಟೀಲ ತಿಳಿಸಿದರು.

ಕೋಟ್:

ನಷ್ಟದ ಕುರಿತು ಹಿಂದಿನ ಆಡಳಿತ ಮಂಡಳಿ ಸೇರಿ ಸದ್ಯಕ್ಕೆ ಯಾರ ಮೇಲೂ ಆಪಾದನೆ ಮಾಡಲ್ಲ. ಸಮಗ್ರವಾಗಿ ಅಧ್ಯಯನ ಮಾಡಿ ವರದಿ ಕೊಡುವೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಖರ್ಚು ಕಡಿಮೆ ಮಾಡಿ ಮತ್ತೆ ಒಕ್ಕೂಟ ಲಾಭದಲ್ಲಿ ಬರುವಂತೆ ಮಾಡುವುದು ನಮ್ಮ ಗುರಿಯಾಗಿದೆ.

- ಮಂಜನಗೌಡ ಪಾಟೀಲ, ಅಧ್ಯಕ್ಷ, ಹಾವೇರಿ ಹಾಲು ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net