

ಹಾವೇರಿ: ಹಾವೇರಿ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಲೀಟರ್‌ಗೆ 3.50 ರೂ., ಕಡಿತ ಮಾಡಿದ್ದನ್ನು ಖಂಡಿಸಿ ಗುರುವಾರ ನಗರದ ಹಾವೇರಿ ಹಾಲು ಒಕ್ಕೂಟ(ಹಾವೆಮುಲ್)ದ ಆಡಳಿತ ಕಚೇರಿ ಬಾಗಿಲು ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದರು.
ನಗರದ ಪಶು ಆಸ್ಪತ್ರೆ ಆವರಣದಲ್ಲಿರುವ ಹಾಲು ಒಕ್ಕೂಟದ ಆಡಳಿತ ಕಚೇರಿ ಎದುರು ಜಮಾಯಿಸಿದ ತಾಲೂಕಿನ ರೈತರು, ದರ ಕಡಿತ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಪ್ರವೇಶ ದ್ವಾರದ ಬಾಗಿಲು ಬಂದ್ ಮಾಡಿ, ಚಿಲಕ ಹಾಕಿದರು. ವ್ಯವಸ್ಥಾಪಕ ನಿರ್ದೇಶಕರನ್ನು ರೈತರು ತರಾಟೆಗೆ ತೆಗೆದುಕೊಂಡರು. ಸರ್ಕಾರ ಲೀಟರ್ ಹಾಲಿಗೆ 4 ರೂ. ಏರಿಸಿದರೆ, ಒಕ್ಕೂಟವು 3.50 ರೂ. ದರ ಕಡಿತ ಮಾಡಿದೆ. ಇದು ರೈತರಿಗೆ ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದರು.
ಹಾಲು ಒಕ್ಕೂಟ ಪ್ರತ್ಯೇಕ ಆಗಿದ್ದು ರೈತರಿಗೆ ಅನುಕೂಲ ಆಗಲೆಂದೇ ಹೊರತು ಲಾಭಕ್ಕಾಗಿ ಅಲ್ಲ. ಇದನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೇಳಿದ್ದಾರೆ. ಆದರೂ ಆಡಳಿತ ಮಂಡಳಿ ರೈತರಿಗೆ ಸಿಗಬೇಕಿದ್ದ ಹಣಕ್ಕೆ ಕತ್ತರಿ ಹಾಕಿರುವುದು ಸರಿಯಲ್ಲ ಎಂದು ಹೇಳಿದರು.
ಸರ್ಕಾರ ಹಾಲಿನ ದರ ಏರಿಕೆ ಮಾಡಿದ್ದರಿಂದ ಬೇರೆ ಒಕ್ಕೂಟಗಳು ಏರಿಕೆ ಮಾಡಿವೆ. ಆದರೆ, ಹಾವೇರಿಯಲ್ಲಿ ಮಾತ್ರ ದರ ಇಳಿಸಲಾಗಿದೆ. ಈ ಕೂಡಲೇ ಹೆಚ್ಚುವರಿಯಾಗಿ 4 ರೂ. ಏರಿಕೆ ಮಾಡಬೇಕೆಂದು ಆಗ್ರಹಿಸಿದರು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಏ.4ರಂದು ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹಾವೆಮುಲ್ ಎಂಡಿ ಅಶೋಕಗೌಡ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದರು.