ಹಾಲಿನ ದರ ಹೆಚ್ಚಿಸಲು ಸೋಮವಾರದ ಗಡವು; ಹಾಲು ಉತ್ಪಾದಕರಿಗೆ ಕೂಡಲೇ 3.50 ರೂ. ಹೆಚ್ಚಿಸಿ; ಒಕ್ಕೂಟ- ರೈತ ಸಂಘದ ಸಭೆಯಲ್ಲಿ ಅನ್ನದಾತರ ಆಗ್ರಹ

4 HVR 3
Published on

ಹಾವೇರಿ: ಹಾಲು ಉತ್ಪಾದಕರೊಂದಿಗೆ ಚರ್ಚಿಸದೇ, ಯಾವುದೇ ಮಾಹಿತಿ ನೀಡದೇ ಏಕಾಏಕಿ 3.50 ರೂ. ಹಾಲಿನ ದರ ಇಳಿಸಿದ್ದು ಒಕ್ಕೂಟದ ತಪ್ಪು ನಿರ್ಧಾರ. ಈ ನಿರ್ಧಾರದಿಂದ ಹಿಂದೆ ಸರಿದು ಕೂಡಲೇ 3.50 ರೂ. ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಏ.7ರಂದು ಒಕ್ಕೂಟದ ಕಚೇರಿ ಎದುರು ಧರಣಿ ಕೂರಲಾಗುವುದು ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಕೆ ನೀಡಿದರು.

ನಗರದ ಪಶು ಇಲಾಖೆ ಆವರಣದ ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಹಾವೆಮುಲ್) ಕಚೇರಿಯಲ್ಲಿ ಶುಕ್ರವಾರ ಒಕ್ಕೂಟದ ಪದಾಧಿಕಾರಿಗಳು ಹಾಗೂ ರೈತ ಸಂಘದ ಪ್ರಮುಖರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಒಕ್ಕೂಟ 18 ಕೋಟಿ ರೂ. ನಷ್ಟದಲ್ಲಿದೆ ನಿಜ. ಆದರೆ, ಆ ಹೊರೆ ತಗ್ಗಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಿ. ಅದನ್ನು ಬಿಟ್ಟು ಬಡ ರೈತರ ಮೇಲೆ ಏಕೆ ಬರೆ ಎಳೆಯುತ್ತೀರಿ. 3.5 ರೂ. ದರ ಇಳಿಸುವಾಗ ಶಾಸಕರು, ಸಚಿವರನ್ನು ಕೇಳಿ ಮಾಡಿಲ್ಲ. ಈಗ ಯಾಕೆ ಅವರನ್ನು ಕೇಳುತ್ತೀರಿ. ಮೊದಲು 3.50 ರೂ. ಕೊಡುವುದಾಗಿ ಘೋಷಿಸಿ. ನಷ್ಟ ಸರಿದೂಗಿಸಲು ಬೇರೆ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.

ರೈತರ ಹೋರಾಟದಿಂದ ಪ್ರತ್ಯೇಕ ಒಕ್ಕೂಟ ಆರಂಭವಾಗಿದೆ. ಇದು ಹಾಳಾಗಲು ಬಿಡಲ್ಲ. ನಾವು ಯಾರ ಮಾತು ಕೇಳಿ ಪ್ರತಿಭಟನೆ ಮಾಡಲ್ಲ. ರೈತರಿಗಾಗಿ ಹೋರಾಟ ಮುಂದುವರಿಸುತ್ತೇವೆ. ನಾವು ನಿಮ್ಮ ಜತೆಗೆ ಇರುತ್ತೇವೆ. ಸಹಕಾರ ಕೊಡುತ್ತೇವೆ. ಹೆಚ್ಚುವರಿ ಸಿಬ್ಬಂದಿ ತೆಗೆಯಿರಿ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ಮಾತನಾಡಿ, ನಾವು ಈಗಷ್ಟೇ ಅಧಿಕಾರಕ್ಕೆ ಬಂದಿದ್ದೇವೆ. ಎಲ್ಲವನ್ನೂ ಅಧ್ಯಯನ ಮಾಡುತ್ತಿದ್ದೇವೆ. ನಷ್ಟ ಸರಿಪಡಿಸಲು ಬದ್ಧರಾಗಿದ್ದೇವೆ. ಒಕ್ಕೂಟದಲ್ಲಿ ಹಲವು ಸಮಸ್ಯೆಗಳಿವೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಹಾಗೂ ಸದಸ್ಯರಿಗೆ ಯಾವುದೇ ತರಬೇತಿ ಇಲ್ಲ. ಆಡಳಿತ ಮಂಡಳಿಯಲ್ಲಿ ಸಮಸ್ಯೆ ಇದೆ. ಸೊಸೈಟಿ ಕಾರ್ಯದರ್ಶಿಗಳಿಗೆ ಹಾಲಿನ ಗುಣಮಟ್ಟ ಪರೀಕ್ಷಿಸುವುದು, ಲೆಕ್ಕ ನಿರ್ವಹಣೆ ಬಗ್ಗೆ ತರಬೇತಿ ಇಲ್ಲ ಎಂದರು.

ಐದು ವರ್ಷ ಮುಗಿದು ಎಂಟು ವರ್ಷ ಆದರೂ ಅವರೇ ಕಾರ್ಯದರ್ಶಿ ಆಗಿದ್ದಾರೆ. ಒಕ್ಕೂಟದ ಅಧಿಕಾರಿಗಳೂ ಪರಿಶೀಲಿಸುವುದಿಲ್ಲ. ಕ್ಯಾಶ್ ಬುಕ್ ಬರೆಯುವುದೂ ಹಲವರಿಗೆ ಗೊತ್ತಿಲ್ಲ. ತರಬೇತಿ ಇಲ್ಲ, ಅನುಭವ ಇಲ್ಲ. ನಿನಗೆ ತಿಳಿದದ್ದು ನೀನು ಮಾಡು, ನನಗೆ ತಿಳಿದದ್ದು ನಾನು ಮಾಡುವೆ ಎನ್ನುವಂತಾಗಿದೆ. ಒಕ್ಕೂಟ ವಿಲೀನ ಆಗಲು ಬಿಡುವುದಿಲ್ಲ. ಎಲ್ಲರಿಗೂ ತರಬೇತಿ ನೀಡಲಾಗುವುದು ಎಂದರು.

ಮಾರುಕಟ್ಟೆ ವಿಸ್ತರಿಸಲು ಮುಂದಾಗಿದ್ದೇವೆ. ಹುಬ್ಬಳ್ಳಿ ಮಾರುಕಟ್ಟೆ ಸಿಕ್ಕರೆ ಶೇ.50ರಷ್ಟು ಹಾಲು ಮಾರಾಟವಾಗುತ್ತದೆ. ಜಿಲ್ಲೆಯಲ್ಲಿ ಹೆಚ್ಚಿನ ನಂದಿನಿ ಪಾರ್ಲರ್ ಮಾಡಿ ಹಾಲು, ಹಾಲಿನ ಉತ್ಪನ್ನ ಮಾರಾಟ ಮಾಡಲಾಗುವುದು. ಒಂದು ಲೀ. ಹಾಲಿಗೆ ನಾವು 2.50 ರೂ. ಕಮಿಷನ್ ಕೊಡುತ್ತೇವೆ. ಬೇರೆಯವರು 4, 5 ರೂ. ಕೊಡುತ್ತಾರೆ. ಈ ಬಗ್ಗೆ ಕೆಎಂಎಫ್‌ಗೆ ಮನವಿ ಮಾಡಿದ್ದೇನೆ. ಪ್ರತಿ ತಾಲೂಕಿನಲ್ಲಿ ಡೀಲರ್‌ಗಳ ಸಭೆ ನಡೆಸಿ, ಅವರ ಅಹವಾಲು ಆಲಿಸಿ, ದಿನದ 24 ಗಂಟೆಯೂ ಹಾಲು ಸಿಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಒಕ್ಕೂಟದ ಉಪಾಧ್ಯಕ್ಷ ಉಜ್ಜನಗೌಡ ಮಾವಿನತೋಪ, ನಿರ್ದೇಶಕರಾದ ಚಂದ್ರಪ್ಪ ಜಾಲಗಾರ, ಅಶೋಕ ಪಾಟೀಲ, ಶಶಿಧರ ಯಲಿಗಾರ, ತಿಪ್ಪಣ್ಣ ಸಾತಣ್ಣನವರ, ಪ್ರಕಾಶ ಬನ್ನಿಹಟ್ಟಿ, ಬಸವೇಶಗೌಡ ಪಾಟೀಲ, ಶಂಕರಗೌಡ ಪಾಟೀಲ, ಎಂ.ಡಿ ಎಚ್.ಟಿ ಅಶೋಕಗೌಡ, ರೈತ ಸಂಘದ ಶಿವಬಸಪ್ಪ ಗೋವಿ, ಮರಿಗೌಡ ಪಾಟೀಲ, ಎಂ.ಎಂ ಮುಲ್ಲಾ, ಶಿವಯೋಗಿ ಹೊಸಗೌಡ್ರ, ಕಿರಣ ಗಡಿಗೋಳ, ಇತರರಿದ್ದರು.

ಕಲಬೆರಕೆ ಹಾಲು ತಡೆಗಟ್ಟೋಣ

ಜಿಲ್ಲೆಯಲ್ಲಿ ಕಲಬೆರಕೆ ಹಾಲಿನ ದೊಡ್ಡ ಜಾಲ ಇದೆ. ಕಳಪೆ, ಕಲಬೆರಕೆ ಹಾಲಿನಿಂದಾಗಿ ಒಕ್ಕೂಟಕ್ಕೆ ಕೆಟ್ಟ ಹೆಸರು ಬರುತ್ತದೆ. ಎಲ್ಲಿ ಸಮಸ್ಯೆ ಇದೆ ನಿಮಗೂ ಗೊತ್ತಿದೆ. ಈ ಬಗ್ಗೆ ಧೈರ್ಯವಾಗಿ ದೂರು ಕೊಡಿ. ನಾಲ್ಕು ದಿನದಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ. ನಾವೆಲ್ಲ ಸೇರಿ ನಿರ್ಧಾರ ಮಾಡಿದರೆ ಎಲ್ಲ ಸರಿ ಹೋಗುತ್ತದೆ. ರೈತ ಸಂಘದವರು, ರೈತರು ಕಲಬೆರಕೆ ಹಾಲು ತಡೆಗಟ್ಟಲು ಸಹಕರಿಸಿ ಎಂದು ಮಂಜನಗೌಡ ಪಾಟೀಲ ಮನವಿ ಮಾಡಿದರು.

ಸಿಬ್ಬಂದಿ ಸಂಬಳಕ್ಕೆ 9.5 ಕೋಟಿ

ಒಕ್ಕೂಟದ ವಾರ್ಷಿಕ ವಹಿವಾಟಿನ ಶೇ.2ರಷ್ಟು ಅಂದರೆ 5 ಕೋಟಿ ರೂ.ವರೆಗೆ ಅಧಿಕಾರಿ, ಸಿಬ್ಬಂದಿಗೆ ಸಂಬಳಕ್ಕೆ ಖರ್ಚು ಮಾಡಲು ಅವಕಾಶವಿದೆ. ಆದರೆ, ಈ ಒಕ್ಕೂಟದಲ್ಲಿ ವಾರ್ಷಿಕ 9.5 ಕೋಟಿ ರೂ. ಸಂಬಳಕ್ಕಾಗಿ ಖರ್ಚು ಮಾಡಲಾಗುತ್ತಿದೆ. ಈ ಸೋರಿಕೆ ತಡೆಗಟ್ಟಲು ಚಿಂತನೆ ನಡೆದಿದೆ ಎಂದು ಮಂಜನಗೌಡ ಹೇಳಿದರು.

ಕೋಟ್:

ಎಲ್ಲರೂ ಸಹಕಾರ ಕೊಟ್ಟರೆ ಆರು ತಿಂಗಳಲ್ಲಿ ಎಲ್ಲವನ್ನೂ ಸರಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಾವು ಆರ್ಥಿಕವಾಗಿ ಒಕ್ಕೂಟವನ್ನು ಕುಗ್ಗಿಸುವುದು ಬೇಡ. ದಯವಿಟ್ಟು ಒಕ್ಕೂಟ ಉಳಿಸಲು ಸಹಕರಿಸಿ. ಎಲ್ಲ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ, ಶೀಘ್ರವೇ ಯೋಗ್ಯ ನಿರ್ಧಾರಕ್ಕೆ ಬರುತ್ತೇವೆ.

- ಮಂಜನಗೌಡ ಪಾಟೀಲ, ಅಧ್ಯಕ್ಷ, ಹಾವೆಮುಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net