ಹನಿ ನೀರಾವರಿಯಿಂದ ನೀರಿನ ಸದ್ಬಳಕೆ; ಕೃಷಿ ಸಿಂಚಾಯಿ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಜೆ.ಎಸ್.ಹಿಳ್ಳಿ ಹೇಳಿಕೆ

5 HVR 5
Published on

ಹಾವೇರಿ: ರೈತರು ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಹನಿ ನೀರಾವರಿ ಅಳವಡಿಸಿಕೊಳ್ಳುವ ಮೂಲಕ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಮುಖ್ಯ ವಿದ್ಯಾಧಿಕಾರಿ (ಕೃಷಿ) ಹಾಗೂ ಆವರಣ ಮುಖ್ಯಸ್ಥ ಡಾ.ಜೆ.ಎಸ್.ಹಿಳ್ಳಿ ಕರೆ ನೀಡಿದರು.
ರಾಣೆಬೆನ್ನೂರ ತಾಲೂಕು ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ರೇಷ್ಮೆ ಇಲಾಖೆ ಹಾಗೂ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಕೆ, ಮಹತ್ವ ಮತ್ತು ಉಪಯೋಗ ಕುರಿತು ರೈತರಿಗೆ ಆಯೋಜಿಸಿದ್ದ ಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ರೇಷ್ಮೆ ತೋಟ ಹಾಗೂ ಹುಳುಗಳಿಗೆ ತಗಲುವ ರೋಗ ನಿಯಂತ್ರಣ ಕ್ರಮಗಳ ಬಗ್ಗೆ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.
ಸಂಪನ್ಮೂಲ ವ್ಯಕ್ತಿ ಎಸ್.ವಿಜಯಕುಮಾರ್ ಅವರು ಹನಿ ನೀರಾವರಿ ಪದ್ಧತಿಯಲ್ಲಿ ಉಪಯೋಗಿಸುವ ಗುಣಮಟ್ಟದ ಸಾಮಗ್ರಿ ಬಳಕೆ ಮತ್ತು ಉಪಯೋಗ ಕುರಿತು, ಹಿರಿಯ ವಿಜ್ಞಾನಿ ಡಾ.ಗುರುಪ್ರಸಾದ.ಜಿ.ಎಸ್., ಹಿಪ್ಪುನೇರಳೆಗೆ ತಗಲುವ ಕೀಟ ಹಾಗೂ ನಿಯಂತ್ರಣ ಕ್ರಮಗಳ ಕುರಿತು, ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಶ್ರೀನಿವಾಸಲು, ರೇಷ್ಮೆ ಹುಳುಗಳಿಗೆ ತಗಲುವ ರೋಗ ನಿಯಂತ್ರಣ ಬಗ್ಗೆ ಹಾಗೂ ಹೆಣ್ಣುಹುಳುಗಳು ಗೂಡು ರಚನೆ ವಿಫಲತೆ ಕುರಿತು, ವಿಜ್ಞಾನಿ ಡಾ.ಸಂತೋಷ.ಎಚ್.ಎಂ., ಮಣ್ಣು ಮತ್ತು ನೀರಿನ ಪರೀಕ್ಷೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ರೇಷ್ಮೆ ಉಪನಿರ್ದೇಶಕ ಎಂ.ಎಸ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಷ್ಮೆ ಸಹಾಯಕ ನಿರ್ದೇಶಕ ಬಿ.ಆರ್.ಅಂಗಡಿ ಸ್ವಾಗತಿಸಿ, ಇಲಾಖೆಯಿಂದ ಹನಿ ನೀರಾವರಿ ಕಾರ್ಯಕ್ರಮಕ್ಕೆ ಇರುವ ಸಹಾಯಧನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net