ಧನ-ಧಾನ್ಯ ಯೋಜನೆ ಸಮರ್ಪಕ ಅನುಷ್ಠಾನವಾಗಲಿ; ಹನುಮನಮಟ್ಟಿಯಲ್ಲಿ ವರ್ಚುವಲ್ ಕಾರ್ಯಕ್ರಮದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಸೂಚನೆ

11 HVR 5 A
Published on

ಹಾವೇರಿ: ರೈತರ ಪರಿಸ್ಥಿತಿಯನ್ನು ಮನಗಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಪಿಎಂ ಧನ-ಧಾನ್ಯ ಕೃಷಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇಳುವರಿ ಕಡಿಮೆ ಇರುವ ದೇಶದ 100 ಜಿಲ್ಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಸೂಚಿಸಿದರು.

ರಾಣೆಬೆನ್ನೂರ ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯಿಂದ ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ ಉದ್ಘಾಟಿಸಿದ ನೇರ ಪ್ರಸಾರದ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದ ತುಮಕೂರ, ಚಿತ್ರದುರ್ಗ, ಕೊಪ್ಪಳ, ಚಿಕ್ಕಬಳ್ಳಾಪುರ, ಗದಗ ಹಾಗೂ ಹಾವೇರಿ ಜಿಲ್ಲೆ ಸೇರಿ ಆರು ಜಿಲ್ಲೆಗಳು ಆಯ್ಕೆಯಾಗಿವೆ.

ಈ ಮೊದಲು ಕೃಷಿಗೆ ದೇಶದ ಶೇ.14ರಷ್ಟು ಯವ್ಯಯ ವೆಚ್ಚ ಮಾಡಲಾಗುತ್ತಿತ್ತು. ಈ ಯೋಜನೆಯಿಂದ ಶೇ.24ರಷ್ಟು ವೆಚ್ಚ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನ ಸಮರ್ಪಕವಾಗಿ ಆಗಬೇಕು. ರೈತರಿಗೆ ಈ ಯೋಜನೆ ಮಾಹಿತಿ ಕುರಿತು ತರಬೇತಿ ಹಾಗೂ ರೈತರಿಂದ ಸಲಹೆ ಸೂಚನೆ ಪಡೆಯುವಂತೆ ಹಾಗೂ ಕೇಂದ್ರ ಹಾಗೂ ರಾಜ್ಯದ ಸರ್ಕಾರದ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ದೇಶದ ಸಮಗ್ರ ಅಭಿವೃದ್ಧಿಗೆ ಕೃಷಿ ಪಾತ್ರ ಪ್ರಮುಖವಾಗಿದೆ. ಕೃಷಿ ಕ್ಷೇತ್ರದಲ್ಲಿ ಶೇಕಡಾ ಒಂದರಷ್ಟು ಅಧಿಕವಾದರೆ ಶೇ.4ರಷ್ಟು ಪ್ಯಾಕಿಂಗ್ ಹಾಗೂ ಶೇ.10ರಷ್ಟು ಸೇವಾ ವಲಯದ ಅಭಿವೃದ್ಧಿಯಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ನಿಟ್ಟಿನಲ್ಲಿ ಧನ ಧಾನ್ಯ ಯೋಜನೆ ಪೂರಕ ವಾತಾವರಣ ನಿರ್ಮಿಸಲಿದೆ ಎಂದರು.

ಒಕ್ಕಲಿಗನ ಬದುಕು ಬಯಲಿನ ಬದುಕು ಹಾಗೂ ಅನಿಶ್ಚಿತ ಬದುಕು. ಮಳೆ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ, ಸರಿಯಾದ ಬೆಲೆ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೂ ಬಿತ್ತನೆ ಮಾಡುತ್ತಾನೆ. ರೈತ ತನಗೋಸ್ಕರ ಬೆಳೆ ಬೆಳೆಯಲ್ಲ, ಮನುಷ್ಯರ ಒಳತಿಗಾಗಿ ಬೆಳೆಯುತ್ತಾನೆ. ಇಂತಹ ರೈತನ ಶ್ರಮ ಗುರುತಿಸುವ ಕೆಲಸವಾಗಬೇಕು ಎಂದರು.

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಹೆಚ್ಚು ಉದ್ಯೋಗ ಕೊಡುವ ಕ್ಷೇತ್ರವಾಗಿದೆ. ದೇಶದ ಜನಸಂಖ್ಯೆಯಲ್ಲಿ 70ರಿಂದ 80 ಕೋಟಿ ಜನ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಶೇ.20ರಷ್ಟು ಕೃಷಿಯಿಂದ ಜಿಡಿಪಿ ಬರುತ್ತದೆ. ರೈತರ ಜೀವನ ಮಟ್ಟ ಸುಧಾರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಜಿಲ್ಲೆಯಲ್ಲಿ ಸಮಗ್ರ ಕೃಷಿ ಹಾಗೂ ರೈತರ ಆರ್ಥಿಕ ಸುಧಾರಣೆಗಾಗಿ ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ವೀರನಗೌಡ ಪೊಲೀಸಗೌಡ್ರ, ಹನುಮನಮಟ್ಟಿ ಕೃಷಿ ವಿವಿ ಡೀನ್ ಡಾ.ಕೆ.ವಿ.ಬಸವಕುಮಾರ, ಗ್ರಾ.ಪಂ.ಅಧ್ಯಕ್ಷೆ ಗೀತಾ ಮಡಿವಾಳರ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ, ಉಪ ನಿರ್ದೇಶಕ ಕರಿಯಲ್ಲಪ್ಪ, ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಶಿವಕುಮಾರ, ಡಾ.ಬಸವರಾಜ ಕೆಲಗಾರ, ಇತರರು ಉಪಸ್ಥಿತರಿದ್ದರು.

ಬೇಡ್ತಿ- ವರದೆಗಾಗಿ ಪಕ್ಷಾತೀತ ಹೋರಾಟ

ರೈತರು ತುಂಗಾ ಮೇಲ್ದಂಡೆ ಯೋಜನೆಯ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು. ಬೇಡ್ತಿ-ವರದಾ ನದಿ ಜೋಡಣೆ ಅಗತ್ಯವಾಗಿದೆ. ಇದರಿಂದ ಉತ್ತರ ಕನ್ನಡ ಜಿಲ್ಲೆಗೆ ಏನೂ ತೊಂದರೆಯಾಗುವುದಿಲ್ಲ. ಬೆಡ್ತಿ ವರದಾ ನದಿ ಜೋಡಣೆಯಿಂದ ಹಾವೇರಿ, ಬ್ಯಾಡಗಿ, ಶಿಗ್ಗಾಂವಿ ಹಾಗೂ ಸವಣೂರ ತಾಲೂಕುಗಳ ರೈತರಿಗೆ ಅನುಕೂಲವಾಗಲಿದೆ. ಈ ಯೋಜನೆಗೆ ಕೇಂದ್ರದ ಅನುದಾನ ಬೇಕಾಗುತ್ತದೆ. ನಮ್ಮ ನೀರಿನ ಹಕ್ಕನ್ನು ಪಡೆಯಲು ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಒಟ್ಟಾಗಿ ಹೋರಾಡೋಣ ಎಂದು ಬೊಮ್ಮಾಯಿ ಹೇಳಿದರು.

ಕೃಷಿ ಸಾಲಕ್ಕೆ ಸಿಬಿಲ್ ರೇಟಿಂಗ್ ಬೇಕಿಲ್ಲ

ಮುಂಬರುವ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಅಧಿಕ ಸಾಲ ಕೊಡಿಸಲಾಗುವುದು. ರೈತರಿಗೆ ಕೃಷಿ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಅವಶ್ಯಕತೆ ಇರುವುದಿಲ್ಲ. ಈ ಬಗ್ಗೆ ನಾನು ಈಗಾಗಲೇ ಆರ್.ಬಿ.ಐ. ಹಾಗೂ ಸಿಬಿಲ್ ಸಂಸ್ಥೆಯೊಂದಿಗೆ ಮಾತನಾಡಿದ್ದೇನೆ. ನಾವು ಕೇವಲ ಸಿಬಿಲ್ ರೇಟಿಂಗ್ ಮಾಡುತ್ತೇವೆ. ಯಾರಿಗೂ ಸಾಲ ಕೊಡಬೇಡಿ ಎಂದು ಹೇಳುವುದಿಲ್ಲ. ಸಾಲ ಕೊಡುವವರು ಮತ್ತು ತೆಗೆದುಕೊಳ್ಳುವವರ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಬ್ಯಾಂಕ್‌ಗಳನ್ನು ಒಪ್ಪಿಸಿ ಒಂದು ಸ್ಪಷ್ಟವಾದ ಸುತ್ತೊಲೆ ಬಂದಾಗ ಕೃಷಿ ಸಾಲಕ್ಕೆ ಸಿಬಿಲ್ ರೇಟಿಂಗ್ ಅವಶ್ಯಕತೆ ಇರಲ್ಲ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವರೊಂದಿಗೂ ಮಾತನಾಡುವೆ. ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಬೊಮ್ಮಾಯಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net