ಹನುಮನಹಳ್ಳಿ ಹಾಲೇಶ್ವರರ ಕಾರ್ತಿಕೋತ್ಸವ

28 HVR 8
Published on

ಹಾವೇರಿ: ಅಜ್ಞಾನವೆಂಬ ಕತ್ತಲಲ್ಲಿ ಜ್ಯೋತಿ ಬೆಳಗಿಸಿ ಸುಜ್ಞಾನದ ಕಡೆಗೆ ಭಕ್ತರನ್ನು ಕರೆದುಕೊಂಡು ಹೋಗುವುದೇ ಕಾರ್ತಿಕೋತ್ಸವ ಎಂದು ರಾಂಪೂರ, ಬಸವಾಪಟ್ಟಣ ಹಾಲಸ್ವಾಮಿಮಠದ ಸದ್ಗುರು ಶ್ರೀ ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಹೇಳಿದರು.

ತಾಲೂಕಿನ ಹನುಮನಹಳ್ಳಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಾಲೇಶ್ವರರ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ, ಧರ್ಮಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಿತ್ಯ ಜೀವನದ ಬದುಕಿನ ಜಂಜಾಟದಲ್ಲಿ ಭಕ್ತರ ಮನಸ್ಸು ಉಲ್ಲಾಸಗೊಳಿಸಿ, ಬೇಸರ ಕಳೆದು ಗುರುವಿನ ಉಪದೇಶವನ್ನು ಭಕ್ತರಿಗೆ ಕೊಡಿಸಲು ಶ್ರೀಮಠದ ಗುರುಗಳು ಮುಂದಾಗಿದ್ದಾರೆ. ವಿಶ್ವಾರಾಧ್ಯ ಹಾಲಸ್ವಾಮಿಗಳು ಮಠಕ್ಕಾಗಿ ಆಸ್ತಿ ಮಾಡುವುದು ಬೇಕಿಲ್ಲ, ಶ್ರೀ ಮಠದ ಭಕ್ತರೇ ಮಠದ ಆಸ್ತಿ ಎಂಬ ಮನೋಭಾವನೆಯನ್ನು ಹೊಂದಿದ್ದರು ಎಂದರು.

ಹಿರೇಹಡಗಲಿ ಹಾಲಸ್ವಾಮಿಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಆಶೀರ್ವಚನ ನೀಡಿದರು. ಗಂಜಿಗಟ್ಟಿ ಚರಮೂರ್ತೇಶ್ವರಮಠದ ವೈಜನಾಥ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಗದಗನ ರಾಜೀವಗಾಂದಿ ಆರೋಗ್ಯ ವಿಶ್ವವಿದ್ಯಾಲಯದ ಡಾ.ಉಮೇಶ ಪುರದ ಅವರಿಗೆ ಗುರುರಕ್ಷೆ ನೀಡಲಾಯಿತು. ನಾಗತಿಬಸಾಪೂರ ಹಾಲಸ್ವಾಮಿಮಠದ ಗಿರಿರಾಜ ಹಾಲಸ್ವಾಮೀಜಿ ನೇತೃತ್ವ ವಹಿಸಿದ್ದರು.

ಧರ್ಮಸಭೆಯಲ್ಲಿ ಹಿರೇಹಡಗಲಿ ಹಾಲಸ್ವಾಮಿಮಠದ ಹಾಲಸೋಮೇಶ್ವರ ಶ್ರೀಗಳು, ಶ್ರೀಮಠದ ಹಾಲಮುದುಕೇಶ್ವರ ಶ್ರೀಗಳು, ವಾಗೀಶ ಪಂಡಿತಾರಾಧ್ಯ ಹಾಲಸ್ವಾಮೀಜಿ, ಸಣ್ಣ ಹಾಲಸ್ವಾಮೀಜಿ, ಹುಬ್ಬಳ್ಳಿಯ ಆಯುರ್ವೇದ ಆಸ್ಪತ್ರೆಯ ಡಾ.ಮಿಲಿಂದ ಹುಕ್ಕೇರಿ, ಇತರರು ಉಪಸ್ಥಿತರಿದ್ದರು. ಶಿವಾನಂದಯ್ಯ ಚರಂತಿಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಮಲ್ಲಿಕಾರ್ಜುನ ಕೊಡಬಾಳ ನಿರೂಪಿಸಿದರು. ದೇವರಾಜ ಕೋಡಿಹಳ್ಳಿ ಸ್ವಾಗತಿಸಿದರು. ಕನಕಪ್ಪ ದಾಸಣ್ಣವರ ವಂದಿಸಿದರು.

ಮೆರವಣಿಗೆ, ನೃತ್ಯ, ಗಾಯನ :

ಕುಂಭ ಹೊತ್ತ ಮಹಿಳೆಯರಿಂದ ಶ್ರೀಗಳನ್ನು ಸ್ವಾಗತಿಸಲಾಯಿತು. ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ಕಾರ್ತಿಕ ದೀಪವನ್ನು ಹಚ್ಚಲಾಯಿತು. ಭಜನಾ ಮಂಡಳಿ, ಡೊಳ್ಳು ವಾದ್ಯ, ಗೊಂಬೆ ಕುಣಿತ, ವಿವಿಧ ವಾದ್ಯ ವೃಂದಗಳು ಮೆರವಣಿಗೆಗೆ ಮೆರುಗು ತಂದವು. ಕೊನೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗಾಯಕಿ ಮಹನ್ಯಾ ಪಾಟೀಲ, ಯಲಗಚ್ಚನ ಅಪ್ಪು ಡ್ಯಾನ್ಸ್ ಅಕಾಡೆಮಿ ತಂಡ, ಹಾವೇರಿಯ ಎಸ್‌ಆರ್‌ಎಸ್ ಕರೋಕೆ ಸ್ಟುಡಿಯೋ, ಹನುಮನಹಳ್ಳಿ ಸ.ಹಿ.ಪ್ರಾ ಶಾಲಾ ಮಕ್ಕಳು, ನೂಕಾಪುರ ಗ್ರಾಮದ ಲಂಬಾಣಿ ಭಕ್ತರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net