ರೈತರ ಮಕ್ಕಳಿಗೆ ಕನ್ನೆ ಕೊಡುವ ಮನಸ್ಸು ಮಾಡಿ; ಹನುಮನಹಳ್ಳಿ ಹಾಲಸ್ವಾಮಿ ಮಠದಲ್ಲಿ ಶ್ರೀ ಶಿವಯೋಗಿ ಶಿವಕುಮಾರ ಸ್ವಾಮೀಜಿ ಹೇಳಿಕೆ

5 HVR 3 B
Published on

ಹಾವೇರಿ: ಎಲ್ಲ ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ಸರ್ಕಾರಿ ನೌಕರಿ ಇರುವ ಗಂಡು ಬೇಕು ಎಂದು ಕಾಯದೇ, ಅನ್ನ ನೀಡುವ ರೈತರ ಮಕ್ಕಳಿಗೆ ಕನ್ನೆ ಕೊಡುವ ಮನಸ್ಸು ಮಾಡಬೇಕು. ಆಗ ರೈತರ ಮಕ್ಕಳ ಬದುಕು ಹಸನಾಗುತ್ತದೆ ಎಂದು ರಾಂಪುರ ಹಾಲಸ್ವಾಮಿಮಠದ ಸದ್ಗುರು ಶ್ರೀ ಶಿವಯೋಗಿ ಶಿವಕುಮಾರ ಸ್ವಾಮೀಜಿ ಹೇಳಿದರು.

ತಾಲೂಕಿನ ಹನುಮನಹಳ್ಳಿ ಹಾಲಸ್ವಾಮಿ ಮಠದಲ್ಲಿ ಇತ್ತೀಚೆಗೆ ನೂತನವಾಗಿ ನಿರ್ಮಿಸಿದ ಗೋಪುರದ ಉದ್ಘಾಟನೆ, ಕಳಸಾರೋಹಣ, ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ಕನ್ನೆ ಸಿಗುತ್ತಿಲ್ಲ ಎಂಬ ಸಮಸ್ಯೆ ಜಗಜ್ಜಾಹೀರಾಗುತ್ತಿದೆ. ಎಲ್ಲ ತಾಯಂದಿರು ಮದುವೆ ವಿಚಾರ ಬಂದಾಗ ವರ ಸರ್ಕಾರಿ ನೌಕರಿ ಮಾಡಬೇಕು, ಅಂದರೆ ಮಾತ್ರ ನಮ್ಮ ಮಗಳು ಚೆನ್ನಾಗಿರುತ್ತಾಳೆ ಎಂಬ ಮನೋಭಾವನೆ ಹೊಂದಿರುತ್ತಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಆಡಂಬರದ ಮದುವೆಯನ್ನು ಮಾಡುತ್ತಾರೆ. ನಂತರದ ದಿನಗಳಲ್ಲಿ ಕೆಲ ಸಂಬಂಧಗಳಲ್ಲಿ ಬಿರುಕು, ವಿಚ್ಚೇಧನ ಪಡೆಯುವ ಹಂತಕ್ಕೆ ಬಂದು ತಲುಪುತ್ತವೆ. ಈ ನಿಟ್ಟಿನಲ್ಲಿ ಎಲ್ಲ ತಾಯಂದಿರು ಯೋಚಿಸಿ ರೈತರ ಮಕ್ಕಳಿಗೆ ಮಗಳನ್ನು ಕೊಟ್ಟು ಕನ್ಯಾದಾನ ಮಾಡಿದರೆ ರೈತರ ಮಕ್ಕಳು ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ. ಜತೆಗೆ ಸನಾತನ ಧರ್ಮವನ್ನು ಉಳಿಸಿ ಬೆಳೆಸಬೇಕು ಎಂದರು.

ದಿಂಡದಹಳ್ಳಿಯ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹೊಸ ವರ್ಷದಲ್ಲಿ ಹೊಸ ಗೋಪುರ ನಿರ್ಮಾಣವಾಗಿದೆ. ಗುರುಗಳ ಸಂಕಲ್ಪ ಈಡೇರಿಸುವ ಶಕ್ತಿ ಶ್ರೀಮಠದ ಭಕ್ತರಲ್ಲಿದೆ. ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ತಾಯಂದಿರು ಮನೆಗೆ ಬರುವ ಸೊಸೆಯನ್ನು ಮಗಳ ರೂಪದಲ್ಲಿ ನೋಡಿಕೊಳ್ಳಬೇಕು, ಸೊಸೆಯಾದವಳು ಅತ್ತೆ ಮಾವನನ್ನು ತಂದೆ ತಾಯಿ ಎಂದು ಭಾವಿಸಿ ಜೀವನ ನಡೆಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದರು.

ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಕುರವತ್ತಿಯ ಸಿದ್ಧನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಹಡಗಲಿಯ ಅಭಿನವ ಹಾಲಶಿವಯೋಗಿಗಳು, ಗಂಜಿಗಟ್ಟಿಯ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ನೂತನ ವಧುವರರಿಗೆ ಆಶೀರ್ವದಿಸಿದರು. ಶ್ರೀಮಠದ ಸಿದ್ಧರಾಮ ಹಾಲಸ್ವಾಮೀಜಿ, ಹಾಲಮುದುಕೇಶ್ವರ ಸ್ವಾಮೀಜಿ, ವಿವಿಧ ಮಠಾೀಶರು ಉಪಸ್ಥಿತರಿದ್ದರು.

ಕಳಸದ ಮೆರವಣಿಗೆ

ಹಾಲಸ್ವಾಮಿ ಮಠದ ನೂತನ ಗೋಪುರದ ಕಳಶವನ್ನು ಹನುಮನಹಳ್ಳಿ ಗ್ರಾಮದಲ್ಲಿ ಮೆರವಣಿಗೆ ಮೂಲಕ ತರಲಾಯಿತು. ಕುಂಭ ಹೊತ್ತ ಮಹಿಳೆಯರು ಹಾಗೂ ವಿವಿಧ ವಾದ್ಯಗಳೊಂದಿಗೆ ಶಿವಕುಮಾರ ಹಾಲಸ್ವಾಮೀಜಿಯವರ ಪಲ್ಲಕ್ಕಿ ಮೆರವಣಿಗೆ ಸಾಗಿತು. ನಂತರ ಮಠಾಧೀಶರ ಸಮ್ಮುಖದಲ್ಲಿ ಕ್ರೇನ್ ಮೂಲಕ ನೂತನ ಕಳಸಾರೋಹಣ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net