ಯಮನಂತೆ ಎರಗಿದ ಮರ, ವಿದ್ಯುತ್ ತಂತಿ !; ಹಂಸಭಾವಿ ಶಾಲೆಯಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿ ಸಾವು, ಮತ್ತಿಬ್ಬರಿಗೆ ಗಾಯ

25 HVR 6 A
Published on

ಹಿರೇಕೆರೂರ: ಮರದ ಟೊಂಗೆ ಹಾಗೂ ವಿದ್ಯುತ್ ತಂತಿ ತುಂಡಾಗಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಬಿದ್ದ ಪರಿಣಾಮ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ ಘಟನೆ ತಾಲೂಕಿನ ಹಂಸಭಾವಿ ಗ್ರಾಮದ ಮೃತ್ಯುಂಜಯ ವಿದ್ಯಾಪೀಠದ ಶಿವಯೋಗೀಶ್ವರ ಆಂಗ್ಲ ಮಾದ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಸಂಭವಿಸಿದೆ.

ಗ್ರಾಮದ ಮಹ್ಮದ್ ಕಲಂದರಶಾ ಗೌಸ್‌ಮೊಹಿದ್ದೀನ್ ರಟ್ಟೀಹಳ್ಳಿ (10) ಮೃತಪಟ್ಟ ವಿದ್ಯಾರ್ಥಿ. ಶ್ರೇಯಸ್ ಮತ್ತು ಚೇತನ ಗಾಯಗೊಂಡ ವಿದ್ಯಾರ್ಥಿಗಳು.

ಈ ಕುರಿತು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಶಾಸಕ ಯು.ಬಿ.ಬಣಕಾರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಭೇಟಿ ನೀಡಿ, ಪರೀಶೀಲಿಸಿದರು. ನಂತರ ಜಿಲ್ಲಾಸ್ಪ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

ಘಟನೆಯ ವಿವಿರ:  

ಎಂದಿನಂತೆ ಶಾಲಾ ಆವರಣದಲ್ಲಿ ಮಧ್ಯಾಹ್ನ ಊಟದ ಬಳಿಕ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಶಾಲಾ ಆವರಣದಲ್ಲಿದ್ದ ತೆಂಗಿನ ಮರ 11 ಕೆವಿ ವಿದ್ಯುತ್ ತಂತಿಯ ಮೇಲೆ ಬಿದ್ದು, ನಂತರ ಮರ ಹಾಗೂ ವಿದ್ಯುತ್ ತಂತಿ ನೆಲಕ್ಕೆ ಉರುಳಿವೆ. ಆಗ ಅಲ್ಲೇ ಕೆಳಗೆ ಆಟವಾಡುತ್ತಿದ್ದ ಶ್ರೇಯಸ್ ಮತ್ತು ಚೇತನ ಎರಡು ವಿದ್ಯಾರ್ಥಿಗಳಿಗೆ ವಿದ್ಯುತ್ ಶಾಕ್ ಹೊಡೆದು ಗಾಯಗೊಂಡಿದ್ದಾರೆ. ನಂತರ ತೆಂಗಿನಮರದ ಮಟ್ಟಿ ಮಹ್ಮದ್‌ಕಲಂದರಶಾ ತಲೆಯ ಮೇಲೆ ಬಿದ್ದಿದೆ. ತಲೆಗೆ ಬಲವಾಗಿ ಪೆಟ್ಟು ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಕೂಡಲೇ ಇಬ್ಬರು ಗಾಯಾಳು ಬಾಲಕರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಕೋಟ್:

ಹಂಸಭಾವಿಯಲ್ಲಿ ನಡೆದ ದುರ್ಘಟನೆಯಲ್ಲಿ ಓರ್ವ ಬಾಲಕ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಕ್ಷಣ ಇಲಾಖೆಯಿಂದ ಮೃತ ಬಾಲಕನ ಕುಟುಂಬಕ್ಕೆ 1.25 ಲಕ್ಷ ಪರಿಹಾರ ನೀಡಲಾಗುವುದು. ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗುವುದು.

- ಯು.ಬಿ.ಬಣಕಾರ, ಹಿರೇಕೆರೂರ ಶಾಸಕ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net