

ಹಾವೇರಿ: ಹಂಸಭಾವಿಯ ಮೃತ್ಯುಂಜಯ ವಿದ್ಯಾಪೀಠದ ಶತಮಾನೋತ್ಸವ ಸಮಾರಂಭ ಡಿ.2ರಿಂದ ಡಿ.9ರ ವರೆಗೆ ನಡೆಯಲಿದ್ದು, ವಿವಿಧ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಂಸಭಾವಿ ಮೃತ್ಯುಂಜಯ ವಿದ್ಯಾಪೀಠದ ಕಾರ್ಯಾಧ್ಯಕ್ಷ ಪಿ.ವಿ ಕೆರೂಡಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.2ರಂದು ಬೆಳಗ್ಗೆ 7.30ರಿಂದ ಅಂಗ ಸಂಸ್ಥೆಗಳ ಸರ್ವ ಸಿಬ್ಬಂದಿ ಹಾಗೂ ಕ್ರೀಡಾಪಟುಗಳಿಂದ ಗ್ರಾಮದಲ್ಲಿ ಮ್ಯಾರಾಥಾನ್ ಓಟದೊಂದಿಗೆ ಶತಮಾನೋತ್ಸವಕ್ಕೆ ಚಾಲನೆ ಸಿಗಲಿದೆ. ಬೆಳಗ್ಗೆ 11ಕ್ಕೆ ಆಯ್ದ ತಂಡಗಳಿಂದ ರಾಜ್ಯಮಟ್ಟದ ಖೋಖೋ ಕ್ರೀಡೆ ನಡೆಯಲಿದೆ. ಡಿ.3ರಂದು ಬೆಳಗ್ಗೆ 8ರಿಂದ ಎರಡನೇ ದಿನದ ರಾಜ್ಯ ಮಟ್ಟದ ಖೋಖೋ ಹಾಗೂ ಬಾಲ್ ಬ್ಯಾಡ್ಮಿಂಟನ್ ಕ್ರೀಡೆ ಜರುಗಲಿವೆ. ಸಂಜೆ 5ಕ್ಕೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಡಿ.4ರಂದು ಬೆಳಗ್ಗೆ 9ಕ್ಕೆ ಮೃತ್ಯುಂಜಯ ಮಂಟಪದಲ್ಲಿ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ನೃತ್ಯ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಮಲ್ಲಕಂಬ ಪ್ರದರ್ಶನ ನಡೆಯಲಿದೆ. ಡಿ.5ರಂದು ಬೆಳಗ್ಗೆ 10ಕ್ಕೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಡಿ.6ರಂದು ತಾಲೂಕಾ ಮಟ್ಟದ ಚಿತ್ರಕಲಾ ಪ್ರದರ್ಶನ ಹಾಗೂ ಅಂಗಸಂಸ್ಥೆಗಳ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತುಪ್ರದರ್ಶನ ನಡೆಯಲಿದೆ. ಅತ್ಯುತ್ತಮ ಪ್ರದರ್ಶನಕ್ಕೆ ಸೂಕ್ತ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು ಎಂದರು.
ಡಿ.9ರಂದು ಬೆಳಗ್ಗೆ 10ಕ್ಕೆ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶಿರಾಳಕೊಪ್ಪದ ಸಿದ್ದೇಶ್ವರ ಸ್ವಾಮೀಜಿ ಭಾಗವಹಿಸುವರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಲಿದ್ದು, ವಿದ್ಯಾಪೀಠದ ಅಧ್ಯಕ್ಷ ಡಾ.ಎಸ್.ಎಂ.ಎಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಯು.ಬಿ ಬಣಕಾರ, ಬಸವರಾಜ ಶಿವಣ್ಣನವರ, ಮಾಜಿ ಸಚಿವ ಬಿ.ಸಿ.ಪಾಟೀಲ, ಎಸ್.ವಿ ಸಂಕನೂರ, ಭಾರತಿ ಶೆಟ್ಟಿ, ಬಿ.ಎಚ್.ಬನ್ನಿಕೋಡ, ನೆಹರು ಓಲೇಕಾರ, ಡಿ.ಎಂ.ಸಾಲಿ, ಐಎಫ್‌ಎಸ್ ಅಕಾರಿ ಶಂಭುಲಿಂಗ ಹಕ್ಕಿ, ಏರ್ ಕಮಾಂಡರ್ ಅರುಣಕುಮಾರ ಬೇವಿನಮರದ, ಡಿಸಿ ವಿಜಯಮಹಾಂತೇಶ ದಾನಮ್ಮನವರ, ಎಸ್‌ಪಿ ಅಂಶುಕುಮಾರ, ಗ್ರಾಪಂ ಅಧ್ಯಕ್ಷ ರಾಜಶೇಖರ ಹುಚ್ಚಗೊಂಡರ ಪಾಲ್ಗೊಳ್ಳಲಿದ್ದಾರೆ. ವಿಶೇಷ ಸನ್ಮಾನಿತರಾಗಿ ಗ್ರಾಮದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಬಸವರಾಜ ಕೆರೂಡಿ ಹಾಗೂ ಡಾ.ಅನಸೂಯಾ ಕೆರೂಡಿ ಭಾಗವಹಿಸಲಿದ್ದಾರೆ. ಅದೇ ದಿನ ಮಧ್ಯಾಹ್ನ 2.30ಕ್ಕೆ ಹಳೇ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಉಳ್ಳಾಗಡ್ಡಿ, ವಿಜಯಾನಂದ ಆರ್.ಎಸ್., ಎಸ್.ವಿ.ಪಾಟೀಲ, ಪಿ.ವಿ.ಬಳಗಾನೂರ, ಲಿಂಗರಾಜ ಎಲಿ, ಸಿದ್ದಲಿಂಗಪ್ಪ ಕೆಂಬಿ, ಜಗದೀಶ ಕೆರೂಡಿ, ಎಸ್.ಎ.ತಿಪ್ಪೇಶ, ಎಸ್.ಕೆ.ಚನ್ನವೀರಗೌಡ್ರ, ಎಂ.ಸಿ.ಪಾಟೀಲ, ಎಸ್.ಎಂ.ಹೊಸಮನಿ, ಜಯಪ್ಪ ಸೋಮಸಾಗರ, ಜಿ.ಆರ್.ಕೆಂಚಕ್ಕನವರ, ಎ.ಎಸ್.ಶಿವರಾಜ, ಕಿರಣಕುಮಾರ ಜಿ.ಎಂ., ಡಾ.ಎಂ.ಎಂ.ಅಕ್ಕಿ, ಇತರರಿದ್ದರು.