

ಹಾವೇರಿ: ನಾಡಹಬ್ಬ ದಸರಾ ಹಬ್ಬವನ್ನು ನಾಡಿನೆಲ್ಲೆಡೆ ವಿಭಿನ್ನವಾಗಿ ಆಚರಿಸಲಾಗುತ್ತದೆ. ಮೈಸೂರು ಮಹಾರಾಜರ ಖಾಸಗಿ ದರ್ಬಾರ್ ವಾದರಿಯಲ್ಲಿ ತಾಲೂಕಿನ ಹಂದಿಗನೂರು ಗ್ರಾಮದ ವಾಡೆಯ ದೇಸಾಯಿ ಮನೆತನದವರು ಶರನ್ನವರಾತ್ರಿ ಸಂದರ್ಭದಲ್ಲಿ ನಡೆಸುವ ಖಾಸಗಿ ದರ್ಬಾರ್ ಕೂಡ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ.
ಮೈಸೂರು ದಸರಾ ಆರಂಭವಾದ ಒಂದು ವರ್ಷದ ನಂತರ ಹಂದಿಗನೂರು ಗ್ರಾಮದ ದೇಸಾಯಿ ಮನೆತನದವರು ಖಾಸಗಿ ದರ್ಬಾರ್ ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಈ ವಾಡೆಯಲ್ಲಿ ಕಳೆದ ನಾಲ್ಕು ಶತವಾನಗಳಿಂದ ನವರಾತ್ರಿ ಸಂದರ್ಭದಲ್ಲಿ ಪ್ರತಿವರ್ಷ ಖಾಸಗಿ ದರ್ಬಾರ್ ಹಾಗೂ ಬನ್ನಿ ಮುಡಿಯುವ ಸಂಪ್ರದಾಯ ನಡೆಸುತ್ತಿದ್ದು, ಈ ವರ್ಷ 414ನೇ ಖಾಸಗಿ ದರ್ಬಾರ್ ಸಾಂಪ್ರದಾಯಿಕವಾಗಿ ನಡೆಯಿತು.
ಗ್ರಾಮದ ವಾಡೆಯಲ್ಲಿರುವ ವಾಮಲೇದೇಸಾಯಿ ಅವರು ಬಿಳಿ ಬಣ್ಣದ ರೇಷ್ಮೆ ವಸ್ತ್ರ ಹಾಕಿಕೊಂಡು ಖಾಸಗಿ ದರ್ಬಾರ್ ನಡೆಸಿದರು. ಇದಕ್ಕೂ ಮುನ್ನ ವಾಡೆ ಪೂರೋಹಿತರೊಂದಿಗೆ ಆಯುಧ ಪೂಜೆ ನೆರವೇರಿಸಿದರು. ನಂತರ ಗ್ರಾಮಸ್ಥರಿಂದ ಒಪ್ಪಿಗೆ ಪತ್ರ ಪಡೆದು ವಾಡೆ ವಾಲೀಕರ ಸಂಪ್ರದಾಯದಂತೆ ಸೇವಕರಿಗೆ ಆಯುಧಗಳನ್ನು ನೀಡಿ ಖಾಸಗಿ ದರ್ಬಾರ್ ಆರಂಭಿಸಿದರು.
ಬನ್ನಿ ಮುಡಿದು ಸಂಭ್ರಮ
ಖಾಸಗಿ ದರ್ಬಾರ್ ಮುಗಿಸಿದ ನಂತರ ವಾಮಲೇದೇಸಾಯಿ ಅವರು ಗ್ರಾಮಸ್ಥರೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ದ್ಯಾಮವ್ವ ದೇವಿ ಪಲ್ಲಕ್ಕಿ, ಗಾಳೆವ್ವದೇವಿ ಪಲ್ಲಕ್ಕಿ, ದುರ್ಗಾದೇವಿ ಪಲ್ಲಕ್ಕಿ, ಬಸವೇಶ್ವರ ದೇವರ ಪಲ್ಲಕ್ಕಿ, ಆಂಜನೇಯ ದೇವರ ಪಲ್ಲಕ್ಕಿಯೊಂದಿಗೆ ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಬನ್ನಿಮಂಟಪಕ್ಕೆ ತೆರಳಿ ಬನ್ನಿಗಿಡಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬನ್ನಿ ಮುಡಿದರು. ಬಳಿಕ ಮೆರವಣಿಗೆ ಮೂಲಕ ಮರಳಿ ವಾಡೆಗೆ ಬರುವ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು 17ನೇ ಗಾದಿ ವಾಲೀಕರಾದ ಅರವಿಂದ ವಾಮಲೇದೇಸಾಯಿ ಅವರಿಗೆ ಆರತಿ ಬೆಳಗಿ ಹರಸಿದರು.
ಕೋಟ್:
ಹಂದಿಗನೂರ ವಾಮಲೇದೇಸಾಯಿ ಕುಟುಂಬ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ವಿಶೇಷ ಕೊಡುಗೆ ನೀಡುವ ಜತೆಗೆ ಸ್ವಾತಂತ್ರ್ಯ ಚಳವಳಿಯಲ್ಲೂ ಭಾಗವಹಿಸಿದೆ. ಇಂತಹ ಮನೆತನದವರು ಬಾಳಿ ಬದುಕಿ ಗತವೈಭವಕ್ಕೆ ಸಾಕ್ಷಿಯಾಗಿರುವ ವಾಡೆ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ಸರ್ಕಾರ ವಾಡೆಯ ಅಭಿವೃದ್ಧಿಗಾಗಿ ಅನುದಾನ ನೀಡಿ ಜೀರ್ಣೋದ್ಧಾರಗೊಳಿಸುವ ಮೂಲಕ ಹಳೆಯ ಗತವೈಭವವನ್ನು ಭವಿಷ್ಯದ ಪೀಳಿಗೆಗೆ ಪರಿಚಯಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಗಮನ ಹರಿಸಬೇಕು
- ಸಿ.ಎಸ್.ಮರಳಿಹಳ್ಳಿ, ಮುಖ್ಯ ಶಿಕ್ಷಕ, ಹಂದಿಗನೂರ