ಹೆದರದೇ ಮುನ್ನುಗ್ಗಿ, ಗೆಲುವು ಸಾಧಿಸಿ; ಅಂಗವಿಕಲರ ಸಮಾವೇಶದಲ್ಲಿ ಸಂಜೀವಕುಮಾರ ನೀರಲಗಿ ಕಿವಿಮಾತು

2 HVR 8
Published on

ಹಾವೇರಿ: ದೃಢ ನಿರ್ಧಾರ, ಅಚಲ ವಿಶ್ವಾಸ, ಸತತ ಪರಿಶ್ರಮದಿಂದ ಏನು ಬೇಕಾದರೂ ಸಾಧಿಸುತ್ತೇವೆ ಎಂದು ಈಗಾಗಲೇ ಅನೇಕ ವಿಕಲಚೇತನರು ಈ ಜಗತ್ತಿಗೆ ಸಾಧಿಸಿ ತೋರಿಸಿದ್ದಾರೆ. ಅವರಂತೆ ನೀವೂ ಎಲ್ಲ ಭೇದಭಾವ, ಭಯ ಎಲ್ಲವನ್ನೂ ಬಿಟ್ಟು ವಿವಿಧ ಕ್ಷೇತ್ರದಲ್ಲಿ ಮುನ್ನುಗ್ಗಿ, ಗೆಲುವು ಸಾಧಿಸಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಕಿವಿಮಾತು ಹೇಳಿದರು.

ಕರ್ನಾಟಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರಕ್ಕೆ ವಿಕಲ ಚೇತನರ ಬಗ್ಗೆ ಅಪಾರವಾದ ಕಾಳಜಿ ಮತ್ತು ಆಸಕ್ತಿ ಇದೆ. ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳಿಗಾಗಿ ಸದಾ ಕಾಲ ನಮ್ಮನ್ನು ಸಂಪರ್ಕಿಸಿ. ನಿಮಗೆ ಸರ್ಕಾರ ಮಟ್ಟದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ ಎಂದರು.

ಸಂಘದ ಅಧ್ಯಕ್ಷ ಮಹದೇವ ಹಡಪದ ಮಾತನಾಡಿ, ವಿಕಲಚೇತನರಿಗೆ ರಾಜ್ಯದಲ್ಲಿ 5 ಸಾವಿರ ರೂ. ಮಾಶಾಸನ ಹೆಚ್ಚಿಸುವುದು, 2016ರ ಅಂಗವಿಕಲರ ಹಕ್ಕುಗಳ ಅಧಿನಿಯಮದ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೊತ್ತಾಯ ಮಂಡಿಸಿದರು.

ಸಮಾವೇಶದಲ್ಲಿ ಸಕ್ಷಮ ಅಧ್ಯಕ್ಷೆ ಪ್ರಭಾವತಿ ತಿಳವಳ್ಳಿ, ಶಿವಾನಂದ ಮ್ಯಾಗೇರಿ, ಗುಡ್ಡಪ್ಪ ಮಲ್ಲೂರ, ಶಿವಣ್ಣ ಕಾಯಕದ, ಸೇರಿದಂತೆ ನೂರಾರು ಸದಸ್ಯರು, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net