

ಹಾವೇರಿ: ಲೋಕಸಭಾ ಚುನಾವಣೆಯ ಮತದಾನ ಜಾಗೃತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಮತದಾನ ಜಾಗೃತಿಗಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಕಲಚೇತನರ ಬೈಕ್ ಜಾಥಾಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಅಕ್ಷಯ ಶ್ರೀಧರ ಚಾಲನೆ ನೀಡಿದರು.
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಜಾಥಾ ಪಿ.ಬಿ.ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗವಾಗಿ ಡಿ.ದೇವರಾಜ ಅರಸು ಭವನದವರೆಗೆ ಸಾಗಿತು. ನೂರಾರು ಬೈಕ್‌ಗಳಲ್ಲಿ ವಿಶೇಷಚೇತನರು ಬೈಕ್ ಮೇಲೆ ಸಂಚರಿಸುತ್ತ ಮತದಾನ ಜಾಗೃತಿ ಮೂಡಿಸುವ ಪ್ಲೇ ಕಾರ್ಡ್‌ಗಳನ್ನು ಪ್ರದರ್ಶಿಸಿದರು. ಮೇ 7ರಂದು ತಪ್ಪದೇ ಮತದಾನ ಮಾಡಿ ಎಂಬ ಘೋಷಣೆಗಳೊಂದಿಗೆ ಸಾರ್ವಜನಿಕರ ಗಮನ ಸೆಳೆದರು. ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಆಶು ನದಾಫ್, ಇತರರು ಉಪಸ್ಥಿತರಿದ್ದರು.