ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ನೇರ ಪ್ರವೇಶ; ವಿಕಲಚೇತನರಿಗೆ ಶೇ.5ರಷ್ಟು ಮೀಸಲಾತಿ; ಅಂಗವಿಕಲರ ಹಕ್ಕುಗಳ ಆಯುಕ್ತ ಸೂರ್ಯವಂಶಿ ಸೂಚನೆ

19 HVR 7
Published on

ಹಾವೇರಿ: ವಿವಿಧ ವಸತಿ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆ ಇಲ್ಲದೆ ಶೇ.10ರಷ್ಟು ವಿಕಲಚೇತನ ಮಕ್ಕಳಿಗೆ ನೇರ ಪ್ರವೇಶಕ್ಕೆ ಅವಕಾಶವಿದೆ. ಅದೇ ರೀತಿ ವಿದ್ಯಾರ್ಥಿಗಳಲ್ಲಿ ಸಹ ಪ್ರವೇಶ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯುಕ್ತ ದಾಸ್ ಸೂರ್ಯವಂಶಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿಕಲಚೇತನರ ಅನುದಾನದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳಲ್ಲಿ ವಿಕಲಚೇತನರಿಗೆ ಶೇ.5ರಷ್ಟು ಮೀಸಲಾತಿ ನೀಡಲಾಗಿದೆ. ವಿವಿಧ ಯೋಜನೆಗಳ ಆಯ್ಕೆಯಲ್ಲಿ ಅರ್ಹ ವಿಕಲಚೇತನರಿಗೆ ಆದ್ಯತೆ ನೀಡಬೇಕು. ವಿಕಲಚೇತನರ ಅಭಿವೃದ್ಧಿಗೆ ಮೀಸಲಾದ ಅನುದಾನ ಸದ್ಬಳಕೆಯಾಗಬೇಕು ಎಂದು ತಾಕೀತು ಮಾಡಿದರು.

ದೇಶದಲ್ಲಿ ಅಂದಾಜು 23 ಕೋಟಿ ಹಾಗೂ ರಾಜ್ಯದಲ್ಲಿ ಒಂದು ಕೋಟಿ ವಿಕಲಚೇತನರಿದ್ದಾರೆ. 21 ಬಗೆಯ ವಿಕಲತೆಯನ್ನು ಗುರುತಿಸಲಾಗಿದೆ. ವಿಕಲಚೇತನರಿಗೆ ಶಿಕ್ಷಣ, ಉದ್ಯೋಗ ಹಾಗೂ ಸ್ವಯಂ ಉದ್ಯೋಗಕ್ಕೆ ಸಾಲ ಹಾಗೂ ಸಹಾಯಧನ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಕಚೇರಿಗೆ ವಿಕಲಚೇತನರು ಬಂದಾಗ ಅವರ ಸಮಸ್ಯೆಗಳನ್ನು ಸೌಜನ್ಯದಿಂದ ಆಲಿಸುವ ಮೂಲಕ ಅವರ ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದರು.

ಸರ್ಕಾರಿ ಕಚೇರಿಗಳು, ಪ್ರವಾಸಿ ತಾಣಗಳು, ಬಸ್ ನಿಲ್ದಾಣ, ಶಾಲಾ-ಕಾಲೇಜ್‌ಗಳು ವಿಕಚೇತನ ಸ್ನೇಹಿಯಾಗಿರಬೇಕು. ರ‌್ಯಾಂಪ್, ಶೌಚಗೃಹ ಸೇರಿದಂತೆ ಮೂಲ ಸೌಲಭ್ಯಗಳನ್ನು ಹೊಂದಿರಬೇಕು. ಶ್ರವಣದೋಷ ಅಥವಾ ಅಂಧ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ಕೊಡಲು ಬಂದರೆ ಅಲ್ಲಿ ಬ್ರೈಲ್‌ಲಿಪಿ ಹಾಗೂ ಸೈನ್ ಲಾಂಗವೆಜ್ ಪರಿಣಿತರು ಇರಬೇಕು ಎಂದರು.

ಎರಡು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ವಿಕಲಚೇತನರ ಕುಂದುಕೊರತೆ ಸಭೆ ನಡೆಸಬೇಕು. ವಸತಿ ಯೋಜನೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಆಹಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಶೇ.5ರಷ್ಟು ಆದ್ಯತೆ ನೀಡಬೇಕು. ಶ್ರವಣದೋಷ ಮಕ್ಕಳಿಗೆ ಸೈನ್ ಲಾಂಗವೇಜ್ ಹಾಗೂ ಅಂಧ ಮಕ್ಕಳಿಗೆ ಬ್ರೈಲ್ ಲಿಪಿ ಪರಿಣಿತರಿಂದ ಶಿಕ್ಷಣ ಕೊಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ಈಗಾಗಲೇ ಲಿಂಗತ್ವ ಅಲ್ಪಸಂಖ್ಯಾತರಿಗೆ ತರಬೇತಿ ನೀಡಿ, ಅಕ್ಕ ಕೆಫೆ ಆರಂಭಿಸಲಾಗಿದೆ. ಅದೇ ರೀತಿ ವಿಕಲಚೇತನರು ಮುಂದೆ ಬಂದರೆ ಅವರಿಗೆ ತರಬೇತಿ ನೀಡಿ, ಕೆಫೆ ಆರಂಭಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಉಪ ವಿಭಾಗಾಧಿಕಾರಿ ಎಚ್.ಬಿ ಚನ್ನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಇತರರು ಉಪಸ್ಥಿತರಿದ್ದರು.

ಪ್ರಾಥಮಿಕ ಹಂತದಲ್ಲೆ ಪತ್ತೆ ಹಚ್ಚಿ

ರಾಷ್ಟ್ರೀಯ ಬಾಲ್ಯ ವಾಸ್ಥ್ಯ ಕಾರ್ಯಕ್ರಮದಡಿ ಎಲ್ಲ ಮಕ್ಕಳ ಸ್ಕ್ರೀನಿಂಗ್ ಮಾಡಬೇಕು, ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿರುವ ವಿಕಲತೆಯನ್ನು ಕಂಡುಹಿಡಿದು ಅಗತ್ಯವಿರುವ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ನೀಡಬೇಕು ಎಂದು ಸೂರ್ಯವಂಶಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ 38 ಸಾವಿರ ಸದಸ್ಯರು

ಜಿಲ್ಲೆಯಲ್ಲಿ 24,898 ಪುರುಷ, 13,293 ಮಹಿಳೆಯರು ಹಾಗೂ ಆರು ಜನರು ತೃತೀಯ ಲಿಂಗಿಗಳು ಸೇರಿ 38,197 ವಿಕಲಚೇತನರಿದ್ದಾರೆ. ಎಲ್ಲರಿಗೂ ಯುಡಿಐಡಿ ಕಾರ್ಡ್ ವಿತರಣೆ ಮಾಡಲಾಗಿದೆ. ಸೊನ್ನೆಯಿಂದ 6 ವರ್ಷದೊಳಗಿನ 260 ಗಂಡು ಹಾಗೂ 163 ಹೆಣ್ಣು ಮಕ್ಕಳು, ಏಳರಿಂದ 18 ವರ್ಷದೊಳಗಿನ 3,633 ಗಂಡು ಹಾಗೂ 2339 ಹೆಣ್ಣು ಮಕ್ಕಳು, 19ರಿಂದ 60 ವರ್ಷದೊಳಗಿನ 17,245 ಪುರುಷ ಹಾಗೂ 9,622 ಮಹಿಳೆಯರು ಮತ್ತು ಐದು ಜನ ತೃತೀಯ ಲಿಂಗಿಗಳು, 60 ವರ್ಷ ಮೇಲ್ಪಟ್ಟ 3,759 ಪುರುಷ ಹಾಗೂ 1,165 ಮಹಿಳೆಯರು ಹಾಗೂ ಓರ್ವ ತೃತೀಯ ಲಿಂಗಿ ಇರುತ್ತಾರೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಆಶು ನದಾಫ್ ವಿವರಿಸಿದರು.

ವೀಲ್‌ಚೇರ್, ದ್ವಿಚಕ್ರವಾಹನ ವಿತರಣೆ

6,450 ವಿಕಲಚೇತನರಿಗೆ ಸಾಧನ ಸಲಕರಣೆ, 17 ವಿಕಲಚೇತನರಿಗೆ ಬ್ಯಾಟರಿ ಚಾಲಿತ ವಿಲ್‌ಚೇರ್, ದೃಷ್ಟಿದೋಷವುಳ್ಳ 70 ಜನರಿಗೆ ಬ್ರೈಲ್ ಕಿಟ್, 1,400 ದೈಹಿಕ ಅಂಗವಿಕಲರಿಗೆ ಮೋಟಾರೀಕೃತ ದ್ವಿಚಕ್ರವಾಹನ, ಶ್ರವಣದೋಷವುಳ್ಳ 62 ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕೆ ಹೊಲಿಗೆ ಯಂತ್ರ, ಎಸ್‌ಎಸ್‌ಎಲ್‌ಸಿ ಮತ್ತು ಅದಕ್ಕಿಂತ ಹೆಚ್ಚಿನ ವ್ಯಾಸಂಗ ಮಾಡುತ್ತಿರುವ 117 ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಮಾತನಾಡುವ ಲ್ಯಾಪಟಾಪ್ ವಿತರಿಸಲಾಗಿದೆ. ಏಳು ಜನ ವಿವಿಧ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು, 14 ಜನ ನಗರ ಪುನರ್ವಸತಿ ಕಾರ್ಯಕರ್ತರು ಹಾಗೂ 223 ಗ್ರಾಮೀಣ ಪುನರ್ವಸತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆಶು ನದಾಫ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net