ವಿಶೇಷಚೇತನರ ರಾಜ್ಯಮಟ್ಟದ ಸಮಾವೇಶ ಡಿ.1ರಂದು

29 Angavikara samavesha
Published on

ಹಾವೇರಿ: ಕರ್ನಾಟಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಡಿ.1ರಂದು ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ವಿಕಚೇತನರ ವಿವಿಧ ಬೇಡಿಕೆಗಳ ಹಕ್ಕೋತ್ತಾಯಕ್ಕಾಗಿ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಹದೇವಪ್ಪ ಹಡಪದ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ವಿಕಲಚೇತನರಿಗೆ ರಾಜ್ಯ ಸರ್ಕಾರ ನೀಡುತ್ತಿರುವ 13,00 ರೂ. ಮಾಶಾಸನದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ವಿಶೇಷಚೇತನರು ಸರ್ವಾಂಗೀಣ ಅಭಿವೃದ್ಧಿ ಇಲ್ಲದೇ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಿಂಗಳಿಗೆ 5,000 ರೂ. ಮಾಸಾಶನ ಹೆಚ್ಚಿಸಬೇಕು. ವಿಕಲಚೇತನ ಎಂ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ಹಾಗೂ ವಿ.ಆರ್‌ಡಬ್ಲ್ಯೂಗಳನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. 2016ರ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅನಿಯಮ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಮೊದಲ ಬಾರಿಗೆ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ವಿಕಲಚೇತನರ ಕಲ್ಯಾಣಾಧಿಕಾರಿ ಆಶು ನದಾಫ, ಇತರರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ವಿಶೇಷಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

ರಾಜ್ಯ ಕಾರ್ಯದರ್ಶಿ ಪ್ರಭಾವತಿ ತಿಳವಳ್ಳಿ ಮಾತನಾಡಿ, ರಾಜ್ಯದಲ್ಲಿ ಏಕರೂಪ ಮಾಶಾಸನ ವ್ಯವಸ್ಥೆ ಜಾರಿಯಾಗಬೇಕು. ಮಹಾರಾಷ್ಟ್ರದಂತೆ ರಾಜ್ಯದಲ್ಲೂ 5 ಸಾವಿರ ರೂ. ಮಾಸಾಶನ ಕೊಡಬೇಕು. ವಿಶೇಷಚೇತನರು 660 ರೂ. ನೀಡಿ ರಿಯಾಯ್ತಿ ಬಸ್‌ಪಾಸ್ ಪಡೆದು ಓಡಾಡುತ್ತಿದ್ದು, 100 ಕಿಮೀನಿಂದ 300 ಕಿಮೀಗೆ ಪ್ರಯಾಣದ ವ್ಯಾಪ್ತಿ ಹೆಚ್ಚಿಸಬೇಕು. ಅಥವಾ ಶಕ್ತಿ ಯೋಜನೆಯಲ್ಲಿ ವಿಶೇಷಚೇತನರನ್ನೂ ಸೇರಿಸಬೇಕು. ಬಜೆಟ್‌ನಲ್ಲಿ ವಿಶೇಷಚೇತನರ ಕಲ್ಯಾಣಕ್ಕಾಗಿಯೇ ಶೇ.5ರಷ್ಟು ಅನುದಾನ ಮೀಸಲಿಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಫಕ್ಕೀರೇಶ ನಾಶಿಪುಡಿ, ಧರ್ಮಪ್ಪ ರಾಮಾಪೂರ, ಹನುಮಂತಪ್ಪ ಕಾಳೆ, ಬಸನಗೌಡ ಪೊಲೀಸ್‌ಗೌಡ್ರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net