

ಹಾವೇರಿ: ತಾಲೂಕಿನ ಸುಕ್ಷೇತ್ರ ಹನುಮನಹಳ್ಳಿ ಗ್ರಾಮದ ಸದ್ಗುರು ಶ್ರೀ ಹಾಲಸ್ವಾಮಿ ಮಠದ ಜಾತ್ರೆ ಆರಂಭವಾಗಿದ್ದು, ಶ್ರೀ ಮಠದ ಪ್ರಮುಖ ಆಚರಣೆಯಾಗಿರುವ ಮುಳ್ಳುಗದ್ದುಗೆ ಉತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಶ್ರೀ ಮಠದ ಸಣ್ಣ ಹಾಲಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಾತ್ರೆ ನೆರವೇರಿತು. ಸ್ವಾಮೀಜಿ ಒಂಭತ್ತು ದಿನಗಳ ಉಪವಾಸ ವ್ರತ ಆಚರಣೆ ಮಾಡಿ ಸೋಮವಾರ ಬೆಳಗ್ಗೆ ಕತೃಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಯಾವುದೇ ಅಂಗವಸ್ತ್ರ ವಿನ್ಯಾಸವಿಲ್ಲದೇ, ಕೌಪೀನ ಬಾಳೆ ಎಲೆ ಧರಿಸಿಕೊಂಡು ರಾತ್ರಿ 10.30ರ ಸುಮಾರಿಗೆ ಮುಳ್ಳುಗದ್ದುಗೆಯನ್ನು ಏರಿದರು.
ಹಾಲಸ್ವಾಮಿ ಮಠದ ಆವರಣದಿಂದ ಆರಂಭವಾದ ಮೆರವಣಿಗೆ ಸತತ ಎರಡು ಗಂಟೆವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂಲ ಸ್ಥಳಕ್ಕೆ ಆಗಮಿಸಿತು. ಶ್ರೀಗಳ ಮುಳ್ಳುಗದ್ದುಗೆ ಉತ್ಸವಕ್ಕೆ ಹಲಗಿ ಭಾರಿಸುವವರು, ಸಮಾಳ ಕಲಾ ತಂಡದವರು, ಡೊಳ್ಳು, ಕಂಸಾಳೆ ಹಾಗೂ ಲಂಬಾಣಿ ನೃತ್ಯ ತಂಡದವರು ಸಾಥ್ ನೀಡಿ ಜಾತ್ರೆಯ ಮೆರುಗು ಹೆಚ್ಚಿಸಿದರು.
ಶತಮಾನಗಳ ಧಾರ್ಮಿಕ ಇತಿಹಾಸ ಹೊಂದಿರುವ ರಾಂಪುರ ಹಾಲಸ್ವಾಮಿ ಮಠ, ಹೂವಿನ ಹಡಗಲಿ, ಸಂಕಧಾಳ ಪುಣ್ಯಕ್ಷೇತ್ರಗಳ ಸಂಸ್ಥಾನ ಮಠವಾದ ಹನುಮನಹಳ್ಳಿ ಗ್ರಾಮದ ಹಾಲೇಶ್ವರ ಮಠದ ಮುಳ್ಳುಗದ್ದುಗೆ ಉತ್ಸವದಲ್ಲಿ ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಕನವಳ್ಳಿ, ಕಾಟೇನಹಳ್ಳಿ, ಭರಡಿ, ಕೂರಗುಂದ ಅಗಡಿ, ನೂಕಾಪುರ, ಕಂಚಾರಗಟ್ಟಿ, ಕೆಂಗೊಂಡ, ಕಳ್ಳಿಹಾಳ ತಿಮ್ಮೇನಹಳ್ಳಿ, ಬಸಾಪುರ, ಬೂದಗಟ್ಟಿ, ಬಸವನಕಟ್ಟಿ, ಸೋಮನಕಟ್ಟಿ, ಅರಬಗೊಂಡ, ಕಲ್ಲೆದೇವರ, ಹನುಮಾಪುರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಮುಳ್ಳುಗದ್ದುಗೆ ಜಾತ್ರಾ ಮಹೋತ್ಸವದಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ತರಾವರಿ ಬಗೆಯ ಪಟಾಕಿಗಳು ಬಾನೆತ್ತರದಲ್ಲಿ ಸಿಡಿಯುತ್ತಿದ್ದು, ಜನಾಕರ್ಷಣೆಗೆ ಒಳಗಾಗಿತ್ತು. ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ಸಿಡಿಮದ್ದು ಪ್ರದರ್ಶನ ವೀಕ್ಷಣೆ ಮಾಡಿದರು.
ಉತ್ಸವದಲ್ಲಿ ಶ್ರೀಮಠದ ಸಿದ್ದರಾಮ ಹಾಲಶಿವಯೋಗಿಗಳು, ಹಾಲ ಮುದುಕೇಶ್ವರ ಶ್ರೀಗಳು, ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಶ್ರೀಗಳು, ಅಭಿನವ ಹಾಲವೀರಪ್ಪಜ್ಜ ಶ್ರೀಗಳು, ಹಾಲ ಅಭಿಷೇಕ ಸ್ವಾಮೀಜಿ, ನಾಗತಿ ಬಸಾಪೂರದ ಗಿರಿರಾಜ ಹಾಲಸ್ವಾಮೀಜಿ, ಸೇರಿ ಹಿರೇಹಡಗಲಿ, ಸಂಕಧಾಳ, ರಾಂಪುರ, ಗುಂಡೇರಿ ಕ್ಷೇತ್ರಗಳ ವಿವಿಧ ಮಠಾಧೀಶರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಭಕ್ತರ ನಂಬಿಕೆ
ಹನುಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು, ಜನಸಾಮಾನ್ಯರು ವರ್ಷಪೂರ್ತಿ ಅನುಭವಿಸುವ ನೋವು ನೋವು, ಸಂಕಷ್ಟಗಳನ್ನು ಎದುರಿಸುತ್ತಾರೆ. ಇವರನ್ನು ಖುಷಿಪಡಿಸುವ ಉದ್ದೇಶದಿಂದ ಜಾತ್ರಾ ಮಹೋತ್ಸವ ಪ್ರಯುಕ್ತ ಒಂದು ದಿನದ ಮಟ್ಟಿಗೆ ಶ್ರೀಗಳು ಮುಳ್ಳುಗದ್ದುಗೆ ಏರುವ ಮೂಲಕ ರೈತರ ನೋವು ನಲಿವುಗಳಲ್ಲಿ ಭಾಗಿಯಾಗಿ ಆಯುರಾರೋಗ್ಯ, ರೈತರಿಗೆ ಒಳ್ಳೆಯ ಮಳೆ, ಬೆಳೆ ಆಗಲೆಂದು ಪ್ರಾರ್ಥಿಸುತ್ತಾರೆಂಬ ನಂಬಿಕೆ ಭಕ್ತರದ್ದಾಗಿದೆ.
ಹಾಲಜ್ಜನ ರಥೋತ್ಸವ
ಮುಳ್ಳುಗದ್ದುಗೆ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಮಂಗಳವಾರ ಸಂಜೆ ಹಾಲಸ್ವಾಮಿ ಮಹಾರಥೋತ್ಸವ ನಡೆಯಿತು. ಶ್ರೀಮಠದ ಆವರಣದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಆರಂಭವಾದ ರಥೋತ್ಸವಕ್ಕೆ ಸಣ್ಣ ಹಾಲಸ್ವಾಮೀಜಿ ಹಾಗೂ ಓಂಕಾರ ಹಾಲಸ್ವಾಮೀಜಿ ಚಾಲನೆ ನೀಡಿದರು. ರಥೋತ್ಸವದ ಕಳಶಕ್ಕೆ ಭಕ್ತರು ಬಾಳೆಹಣ್ಣು, ಉತ್ತತ್ತಿ, ಬೆಲ್ಲ ಎಸೆದು ಪುನೀತರಾದರು.