

ಹಾವೇರಿ/ ಹಾನಗಲ್ಲ: ಯಾಲಕ್ಕಿ ನಗರಿ ಹಾವೇರಿ, ಹಾನಗಲ್ಲ, ಅಕ್ಕಿಆಲೂರ, ಬಾಳಂಬೀಡ, ಸವಣೂರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಗಾಳಿ, ಗುಡುಗು ಸಹಿತ ಮಳೆ ಸುರಿದಿದೆ. ಬೇಸಿಗೆಯ ಬಿಸಿಲಿಗೆ ಕಾದು ಕೆಂಡದಂತಾಗಿದ್ದ ಭುವಿಗೆ ವರುಣನ ಕೃಪೆಯಿಂದ ತಂಪೆರೆದಂತಾಗಿದೆ.
ಹಾವೇರಿ ನಗರ ಸುತ್ತಮುತ್ತ ಗುರುವಾರ ಕೆಲಕಾಲ ಗಾಳಿ ಸಮೇತ ಮಳೆ ಸುರಿಯಿತು. ಸವಣೂರ ಪಟ್ಟಣ ಸುತ್ತಮುತ್ತ ಗಾಳಿ, ಗುಡುಗು ಸಮೇತ ಅಕಾಲಿಕ ಮಳೆ ಸುರಿಯಿತು.
ಹಾನಗಲ್ಲ ಪಟ್ಟಣ ಸುತ್ತಮುತ್ತ ಸುಮಾರು ಅರ್ಧ ಗಂಟೆ ಸಾಧಾರಣ ಮಳೆಯಾಗಿದೆ. ಗ್ರಾಮದೇವಿ ಜಾತ್ರೆ ನಡೆಯುತ್ತಿರುವ ಸಂದರ್ಭದಲ್ಲಿ ಮಳೆಯಾಗಿರುವುದನ್ನು ದೇವಿಯ ಕೃಪೆ ಎಂದು ಜನ ಮಾತನಾಡುತ್ತಿದ್ದಾರೆ. ಅಕ್ಕಿಆಲೂರಿನಲ್ಲಿ ರಭಸವಾದ ಮಳೆ ಸುರಿದಿದೆ. ಈ ವರ್ಷದ ಮೊದಲ ಮಳೆ ಇದಾಗಿದ್ದು, ಗುಡುಗು, ಸಿಡಿಲಿನ ಆರ್ಭಟದ ಮಧ್ಯೆಯೂ, ಮಳೆಯ ಆಹ್ಲಾದವನ್ನು ಮತ್ತು ಮಣ್ಣಿನ ಸುವಾಸನೆಯನ್ನು ಜನರು ಆನಂದಿಸಿದರು.
ಅಕ್ಕಿಆಲೂರು ಭಾಗದಲ್ಲಿನ ಹೊಲ-ಗದ್ದೆಗಳಲ್ಲಿ ಭೂಮಿ ನೆನೆಯುವಷ್ಟು ಮಳೆಯಾಗಿದೆ. ದ್ವಿದಳ ಧಾನ್ಯಗಳು, ಗೋವಿನಜೋಳ ಬೆಳೆಗಳಿಗೆ ಈ ಮಳೆ ಅನುಕೂಲಕರವಾಗಿದೆ ಎನ್ನಲಾಗಿದೆ.