

ಹಾವೇರಿ: ಕಾಲೇಜುಗಳಿಗೆ ಹೋಗಲು ಸಾರಿಗೆ ಸಂಸ್ಥೆ ಬಸ್‌ಗಳನ್ನೇ ಅವಲಂಬಿಸಿರುವ ನಗರದ ಹೊರವಲಯದ ಹಾನಗಲ್ಲ ರಸ್ತೆಯ ಶ್ರೀಕಂಠಪ್ಪ ಬಡಾವಣೆಯ ಎರಡು ಹಾಸ್ಟೆಲ್‌ಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಬಸ್ ನಿಲುಗಡೆ ಮಾಡದ ಕಾರಣಕ್ಕೆ ಬೇಸತ್ತು ಬುಧವಾರ ದಿಢೀರನೇ ಬಸ್‌ಗಳಿಗೆ ಅಡ್ಡಗಟ್ಟಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ಹಾಸ್ಟೆಲ್ ವಿದ್ಯಾರ್ಥಿನಿಗಳು ಕಾಲೇಜ್‌ಗಳಿಗೆ ಹೋಗಿ, ಬರಲು ಸಾರಿಗೆ ಸಂಸ್ಥೆ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ, ಇಲ್ಲಿ ಬಸ್‌ಗಳನ್ನು ನಿಲುಗಡೆ ಮಾಡದ ಕಾರಣ ವಿದ್ಯಾರ್ಥಿನಿಯರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ನಿಲುಗಡೆಗೆ ಆಗ್ರಹಿಸಿ ಹಲವು ಬಾರಿ ಸಂಸ್ಥೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ರೋಸಿ ಹೋಗಿದ್ದ ವಿದ್ಯಾರ್ಥಿನಿಯರು ಏಕಾಏಕಿ ಬಸ್ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದಾಗಿ ಹಾನಗಲ್ಲ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಈ ವೇಳೆ ಪೊಲೀಸರು, ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನಿಲುಗಡೆ ಮಾಡಿದ ಬಸ್ ಬಿಡುವುದಿಲ್ಲವೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಭಾಗ್ಯಶ್ರೀ ಎಂ.ಆರ್., ಐಶ್ವರ್ಯ ಕೆ., ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಶ್ರೀಕಂಠಪ್ಪ ಬಡಾವಣೆಯ ನಿವಾಸಿಗಳ ಸಂಘದ ಸದಸ್ಯ ಸಿ.ಕೊಟ್ರೇಗೌಡ ಹಾಗೂ ಹಾಸ್ಟೆಲ್ನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಸ್ಯೆ ಬಗೆಹರಿಸುವ ಭರವಸೆ
ಸ್ಥಳಕ್ಕಾಗಾಮಿಸಿದ ಡಿಪೋ ಮ್ಯಾನೇಜರ್ ಹಾಗೂ ಡಿಟಿಒ ವಿದ್ಯಾರ್ಥಿಗಳ ಅಹವಾಲು ಕೇಳಿದರು. ಬೆಳಗ್ಗೆ 8.30ರಿಂದ 10 ಗಂಟೆವರೆಗೂ ಎರಡು ಹೆಚ್ಚುವರಿ ಬಸ್‌ಗಳನ್ನು ಬಿಡಬೇಕು. ಹಾನಗಲ್ಲ- ಹಾವೇರಿ ಮಾರ್ಗವಾಗಿ ಎರಡೂ ಕಡೆ ಸಂಚರಿಸುವ ಎಲ್ಲ ಬಸ್‌ಗಳನ್ನು ಶ್ರೀಕಂಠಪ್ಪ ಬಡಾವಣೆಗೆ ನಿಲುಗಡೆ ಮಾಡಬೇಕು. ಕೆಲವು ಕಂಡಕ್ಟರ್‌ಗಳು ವಿದ್ಯಾರ್ಥಿನಿಯರಿಗೆ ಅವಾಚ್ಯ ಶಬ್ದ ಬಳಸಿ ದೌರ್ಜನ್ಯ ನಡೆಸುತ್ತಿದ್ದು, ಕೂಡಲೇ ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಅಧಿಕಾರಿಗಳು ಮಾತನಾಡಿ, ಕೂಡಲೇ ಸರ್ವೆ ಮಾಡಿಸಿ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆಗೆ ಅವಕಾಶ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಸಮಸ್ಯೆ ಬಗೆಹರಿಯದೇ ಹೋದರೆ ಮತ್ತೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.