

ಹಾನಗಲ್ಲ: ಬಟ್ಟೆ ಅಂಗಡಿಗೆ ಬಂದಿದ್ದ ಯುವತಿಯ ಅಶ್ಲೀಲ ಫೋಟೋ ತೆಗೆದುಕೊಂಡು ಆಕೆಗೆ ಬೆದರಿಸಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ, ಆಕೆಯಿಂದ 50,000 ರೂ. ನಗದು ಹಾಗೂ ಒಂದು ಚಿನ್ನದ ಸರ ಪಡೆದುಕೊಂಡು ಬ್ಲಾೃಕ್‌ಮೇಲ್ ಮಾಡಿದ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾನಗಲ್ಲ ಪಟ್ಟಣದ ಕಂಚಗಾರ ಓಣಿಯ ಮೈನುದ್ದೀನ್ ಹುಸೇನಸಾಬ ಮುಂಡಗೋಡ (32) ಯುವತಿಗೆ ಕಿರುಕುಳ ನೀಡಿದ ಆರೋಪಿ. ಶಿಕಾರಿಪುರ ಮೂಲದ ಯುವತಿ ಕಿರುಕುಳಕ್ಕೀಡಾಗಿದ್ದಾರೆ.
ಹಾನಗಲ್ಲ ತಾಲೂಕು ಮಕರವಳ್ಳಿಯ ಮಾವನ ಮನೆಯಲ್ಲಿ ಯುವತಿ ವಾಸವಾಗಿದ್ದರು. ಬಟ್ಟೆ ಖರೀದಿಗೆಂದು ಹಾನಗಲ್ಲನ ಬಾಂಬೆ ಲೇಡಿಸ್ ಕಾರ್ನರ್ ಅಂಗಡಿಗೆ ಹೋಗಿದ್ದರು. ಟ್ರಯಲ್ ರೂಮ್‌ಗೆ ಹೋಗಿದ್ದಾಗ ಮೈನುದ್ದೀನ್ ಹೇಗೋ ಆಕೆಯ ಅಶ್ಲೀಲ ಫೋಟೋ ತೆಗೆದುಕೊಂಡಿದ್ದ. ಬಳಿಕ ಆಕೆಗೆ ಆ ಫೋಟೋ ತೋರಿಸಿ ವಿಡಿಯೋ ಕಾಲ್ ಮಾಡಿ ನಗ್ನವಾಗಿ ತೋರಿಸು ಎಂದು ಪೀಡಿಸುತ್ತಿದ್ದಾನೆ. ಅಲ್ಲದೇ ನಿನ್ನ ಅಶ್ಲೀಲ ಫೋಟೋ ಸಾಮಾಜಿಕ ಜಾಲತಾಣಗಳಿಗೆ ಹಾಕುತ್ತೇನೆ ಎಂದು ಬೆದರಿಸಿ 50 ಸಾವಿರ ರೂ. ಹಾಗೂ ಚಿನ್ನದ ಸರ ತೆಗೆದುಕೊಂಡಿದ್ದಾನೆ ಎಂದು ಯುವತಿ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತನ್ನ ಹೆಸರು ‘ಮನೋಜ್’ ಎಂದಿದ್ದ..
ಯುವತಿ ಪರಿಶಿಷ್ಟ ಜಾತಿಗೆ ಸೇರಿದವಳು ಎಂದು ಗೊತ್ತಿದ್ದರೂ ಎರಡು ತಿಂಗಳ ನಂತರ ಮತ್ತೆ ಅದೇ ಅಂಗಡಿಗೆ ಬಂದಿದ್ದ ವೇಳೆ ‘ಮೈನುದ್ದೀನ್’ ತನ್ನ ಹೆಸರು ‘ಮನೋಜ್’ ಎಂದು ಪರಿಚಯಿಸಿಕೊಂಡಿದ್ದ. ಟ್ರಯಲ್ ರೂಮ್‌ನಲ್ಲಿ ಬಟ್ಟೆ ಬದಲಾಯಿಸುವಾಗಿನ ಫೋಟೋ ತೋರಿಸಿ ಬೆದರಿಸಲು ಆರಂಭಿಸಿದ್ದ. ಜಾತಿನಿಂದನೆ ಆರೋಪದಡಿಯಲ್ಲೂ ಪ್ರಕರಣ ದಾಖಲಾಗಿದೆ.