ಅಣ್ಣನ ಪ್ರೀತಿ ವಿಚಾರಕ್ಕೆ ತಮ್ಮನ ಬಲಿ; ಡೆತ್ ನೋಟ್‌ನಲ್ಲಿ ಆರೋಪಿಗಳ ಹೆಸರು ಬರೆದಿಟ್ಟು ಆತ್ಮಹತ್ಯೆ

Suresh Nayaka
Published on

ಹಾವೇರಿ: ಅಣ್ಣನ ಪ್ರೀತಿ ವಿಚಾರಕ್ಕೆ ಉಂಟಾದ ಸಮಸ್ಯೆ ಹಾಗೂ ಹುಡುಗಿಯ ಕಡೆಯವರ ಕಿರುಕುಳದಿಂದ ಬೇಸತ್ತು ತಮ್ಮ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚಿಕ್ಕ ಮಾಗಡಿ ತಾಂಡಾ ನಿವಾಸಿ ಸುರೇಶನಾಯ್ಕ ಖ್ಯುಬಾನಾಯ್ಕ ಆತ್ಮಹತ್ಯೆ ಮಾಡಿಕೊಂಡ ಯುವಕ. ಹಾವೇರಿ ತಾಲೂಕು ಬಾಳೂರು ತಾಂಡಾದ ರಾಜೇಶ್ವರಿ ಲಮಾಣಿ, ರುದ್ರಪ್ಪ ಲಮಾಣಿ, ಚೇತನ ಲಮಾಣಿ, ಪಾರಿಬಾಯಿ ಲಮಾಣಿ, ರಘು ಲಮಾಣಿ, ರಾಜ ಲಮಾಣಿ ವಿರುದ್ಧ ಹಂಸಬಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಜೀವನಕ್ಕೆ ಆಸರೆಯಾಗಿದ್ದ ಕಾರು ಕಳವಾಗಿದೆ. ಇದರಿಂದ ಸಾಲ ತೀರಿಸಲೂ ಆಗುತ್ತಿಲ್ಲ. ಯಾವುದೋ ವಿಚಾರವಾಗಿ ನನ್ನ ಜೀವನದಲ್ಲಿ ಕೆಲವರು ಆಟವಾಡುತ್ತಿದ್ದಾರೆ. ಹಾಗಾಗಿ, ನಾನು ನನ್ನ ಜೀವನ ಅಂತ್ಯಗೊಳಿಸಿಕೊಳ್ಳುತ್ತಿದ್ದೇನೆ. ಹಾಗಾಗಿ, ಪೊಲೀಸರು ನನ್ನ ಸಾವಿಗೆ ಕಾರಣವಾಗಿರುವವರಿಗೆ ಶಿಕ್ಷೆ ಕೊಡಿಸಿ. ನಾನು ಮಾಡಿರುವ ಸಾಲವನ್ನು ಇವರಿಂದ ನಷ್ಟ ಭರಿಸಿಕೊಳ್ಳಿ ಎಂದು ಸುರೇಶ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಎಸ್‌ಪಿ ಡಾ.ಶಿವಕುಮಾರ ಗುಣಾರೆ ತಿಳಿಸಿದ್ದಾರೆ.

ಪ್ರಕರಣದ ವಿವರ :
ಸುರೇಶನಾಯ್ಕನ ಸಹೋದರ ಮಂಜುನಾಯ್ಕ ಖ್ಯೂಬಾ ನಾಯ್ಕ ಹಾಗೂ ಹಾವೇರಿ ತಾಲೂಕು ಬಾಳುರು ತಾಂಡಾದ ರಾಜೇಶ್ವರಿ ಲಮಾಣಿ ಇಬ್ಬರೂ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವೇಳೆ ರಾಜೇಶ್ವರಿ, ಮಂಜುನಾಯ್ಕನಿಂದ 4 ಲಕ್ಷ ರೂ. ನಗದು, 10 ಗ್ರಾಂ ಚಿನ್ನದ ಸರ, 15 ಗ್ರಾಂ ಬ್ರಾಸ್‌ಲೇಟ್ ಪಡೆದುಕೊಂಡಿದ್ದಳು. ಇವರಿಬ್ಬರ ಮದುವೆಗೆ ಕುಟುಂಬದವರು ಒಪ್ಪಿರಲಿಲ್ಲ. ಬೇರೆ ಮದುವೆಗೆ ಮುಂದಾಗಿದ್ದರು. ಮಂಜುನಾಯ್ಕನ ಹಣ, ಚಿನ್ನ ವಾಪಸ್ ಕೇಳಿದರೂ ಕೊಟ್ಟಿರಲಿಲ್ಲ. ಈ ಬಗ್ಗೆ ಫೋನ್ ಮಾಡಿ ಕೇಳಿದಾಗ ಜೀವ ಬೆದರಿಕೆ ಹಾಕಿದ್ದರು.
ಮೇ 29ರಂದು ತಡರಾತ್ರಿ ರಘು ಲಮಾಣಿ ಮತ್ತು ರಾಜ ಲಮಾಣಿ ಇಬ್ಬರೂ ಸೇರಿ ಬ್ಯಾಡಗಿ ತಾಲೂಕು ಚಿಕ್ಕಣಜಿ ಗ್ರಾಮದ ನಮ್ಮ ಚಿಕ್ಕಪ್ಪನ ಮನೆಗೆ ಬಂದು ನನ್ನ ತಮ್ಮ ಸುರೇಶ ನಾಯ್ಕನನ್ನು ಅವನದ್ದೇ ಕಾರಿನಲ್ಲಿ ಅಕ್ಕಿಆಲೂಕಿರಗೆ ಕರೆದೊಯ್ದಿದ್ದಾರೆ. ನಿಮ್ಮ ಅಣ್ಣನನ್ನು ತೋರಿಸು ಎಂದು ಆ ಕಾರು ಅಲ್ಲೇ ಇಟ್ಟು, ಬೇರೆ ಕಾರಲ್ಲಿ ಹೊನ್ನಾಳಿ, ಶಿಕಾರಿಪುರಕ್ಕೆ ಕರೆದೊಯ್ದಿದ್ದರು. ಸುರೇಶ ತನ್ನ ಕಾರನ್ನು ವಾಪಸ್ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸುರೇಶ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದ. ಕಾರು ವಾಪಸ್ ಕೊಡದಿದ್ದನ್ನೇ ಮನಸಿಗೆ ಹಚ್ಚಿಕೊಂಡು ಹಂಸಭಾವಿ ಟೋಲ್‌ಗೇಟ್ ಬಳಿ ಜೂ.1ರಂದು ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದಾನೆ ಎಂದು ಸುರೇಶನಾಯ್ಕ ಸಹೋದರ ಮಂಜುನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net