ಹಾನಗಲ್ಲ ಗ್ಯಾಂಗ್‌ರೇಪ್ ಕೇಸ್, 7 ಆರೋಪಿಗಳಿಗೂ ಬೇಲ್ !; ಆರೋಪಿತರ ಗುರುತಿಸಲು ಸಂತ್ರಸ್ತೆ ವಿಫಲ

Published on

ಹಾವೇರಿ: ರಾಜ್ಯಾದ್ಯಂತ ಭಾರೀ ಸುದ್ದಿಯಾಗಿದ್ದ ಹಾನಗಲ್ಲ ಸಾಮೂಹಿಕ ಅತ್ಯಾಚಾರ ಪ್ರಕರಣದ ಏಳು ಆರೋಪಿಗಳಿಗೆ 17 ತಿಂಗಳ ನಂತರ ಹಾವೇರಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಎಫ್‌ಟಿಎಸ್‌ಸಿ-1) ನ್ಯಾಯಾಲಯದಿಂದ ಜಾಮೀನು ದೊರೆತಿದೆ. ಸಂತ್ರಸ್ತೆ ಪ್ರಮುಖ 7 ಆರೋಪಿತರನ್ನು ಗುರುತಿಸಲು ವಿಫಲವಾದ ಹಿನ್ನೆಲೆಯಲ್ಲಿ ಜಾಮೀನು ಸಿಕ್ಕಿದ್ದು, ಅತ್ಯಂತ ಗಂಭೀರವಾದ ಕೇಸ್ ನಾಟಕೀಯ ತಿರುವು ಪಡೆದಂತಾಗಿದೆ.

ಪ್ರಮುಖ ಆರೋಪಿರಾದ ಅಫ್ತಾಬ್ ಚಂದನಕಟ್, ಮದರಸಾಬ ಮಂಡಕ್ಕಿ, ಸಮಿವುಲ್ಲಾ ಲಾಲನವರ, ಮೊಹಮ್ಮದ್ ಸಾದಿಕ್ ಅಗಸಿಮನಿ, ಸೋಹಿಬ್ ಮುಲ್ಲಾ, ತೌಸಿಫ್ ಚೋಟಿ ಮತ್ತು ರಿಯಾಜ್ ಸವಿಕರ್‌ಗೆ ಜಾಮೀನು ದೊರೆತಿದೆ.

ಏಳು ಪ್ರಮುಖ ಆರೋಪಿಗಳು ಸೇರಿದಂತೆ ಆರಂಭದಲ್ಲಿ ಬಂಧಿಸಿದ್ದ 19 ಆರೋಪಿಗಳಲ್ಲಿ 12 ಮಂದಿ 10 ತಿಂಗಳ ಹಿಂದೆ ಜಾಮೀನು ಪಡೆದಿದ್ದರು. ಆದರೆ, ಪ್ರಮುಖ ಏಳು ಆರೋಪಿತರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ಈ ಹಿಂದೆ ಹಲವಾರು ಬಾರಿ ತಿರಸ್ಕರಿಸಿತ್ತು.

26 ವರ್ಷದ ಸಂತ್ರಸ್ತೆ, ಏಳು ಜನ ಪುರುಷರಿಂದ ತನ್ನ ಮೇಲೆ ಜನವರಿ 8, 2023ರಂದು ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಳು. ಹಾನಗಲ್ಲ ತಹಸೀಲ್ದಾರ್ ಸಮ್ಮುಖದಲ್ಲಿ ನಡೆದ ಗುರುತಿನ ಪೆರೇಡ್‌ನಲ್ಲೂ ಶಂಕಿತರನ್ನು ಗುರುತಿಸಿದ್ದಳು. ಆದರೆ, ಸಂತ್ರಸ್ತೆ ತನ್ನ ಹಿಂದಿನ ಹೇಳಿಕೆಗಳನ್ನು ಉಳಿಸಿಕೊಳ್ಳಲು ಹಿಂಜರಿದ ಕಾರಣ ನ್ಯಾಯಾಲಯದಿಂದ ಏಳು ಪ್ರಮುಖ ಆರೋಪಿಗಳಿಗೆ ಜಾಮೀನು ಸಿಕ್ಕಿದೆ ಮೂಲಗಳು ತಿಳಿಸಿವೆ.

ಆರಂಭದಲ್ಲಿ ನೈತಿಕ ಪೊಲೀಸ್‌ಗಿರಿ ನಂತರ ಸಾಮೂಹಿಕ ಅತ್ಯಾಚಾರ

ಈ ಹಿಂದಿನ ಹೆಚ್ಚುವರಿ ಎಸ್‌ಪಿ ಸಿ.ಗೋಪಾಲ ಸುಮಾರು 80 ಸಾಕ್ಷಿಗಳ ಹೇಳಿಕೆಗಳನ್ನು ಒಳಗೊಂಡ ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್‌ಅನ್ನು ಸಿದ್ಧಪಡಿಸಿದ್ದರು. ಡಿಎನ್‌ಎ ಮಾದರಿಗಳು, ಕೂದಲಿನ ಎಳೆಗಳು, ರಕ್ತದ ಮಾದರಿಗಳು, ಅಪರಾಧ ಸ್ಥಳದಿಂದ ವಶಪಡಿಸಿಕೊಂಡ ಒಳ ಉಡುಪುಗಳು, ಗುರುತಿನ ಪೆರೇಡ್ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಗಳು ಭಾಗಿಯಾಗಿರುವ ಬಗ್ಗೆ ವಿವರಗಳು ಲಭ್ಯವಾಗಿದ್ದವು. ನೈತಿಕ ಪೊಲೀಸ್‌ಗಿರಿ ಸಾಮೂಹಿಕ ಅತ್ಯಾಚಾರವಾಗಿ ಬದಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net