ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣ ಮರುತನಿಖೆಯಾಗಲಿ; ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಆಗ್ರಹ

Published on

ಹಾವೇರಿ: ಹಾನಗಲ್ಲ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಜಾಮೀನು ಪಡೆದು ಸಂಭ್ರಮಾಚರಣೆ ನಡೆಸಿರುವುದನ್ನು ಎಬಿವಿಪಿ ಖಂಡಿಸುತ್ತದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಇರುವ ಕಾರಣ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಕ್ಕಿದೆ. ಇದು ಮಹಿಳಾ ವಿರೋಧಿ ಸರ್ಕಾರವಾಗಿದೆ. ಸರ್ಕಾರ ತಕ್ಷಣವೇ ಫಾಸ್ಟ್ ಟ್ರಾಕ್ ನ್ಯಾಯಾಲಯದ ಮೂಲಕ ಈ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಎಬಿವಿಪಿ ಆಗ್ರಹಿಸಿದೆ.

ಹಾನಗಲ್ಲ ತಾಲೂಕಿನಲ್ಲಿ ಜನವರಿ 8, 2024ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿದ್ದ ಏಳು ಆರೋಪಿಗಳು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಹಾವೇರಿ ಜಿಲ್ಲಾ ಕಾರಾಗೃಹದಿಂದ ಹೊರಬರುತ್ತಿದ್ದಂತೆ, ಏಳೂ ಆರೋಪಿಗಳು ತಮ್ಮ ಬೆಂಬಲಿಗರೊಂದಿಗೆ ಹಾವೇರಿಯಿಂದ ಕಾರು, ಬೈಕ್‌ಗಳ ಮೂಲಕ ಸಂಭ್ರಮಾಚರಣೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಘಾತಕಾರಿ ಘಟನೆ ಆಗಿದೆ. ಸಾಮೂಹಿಕ ಅತ್ಯಾಚಾರದ ಆರೋಪವನ್ನು ಹೊತ್ತಿರುವ ಆರೋಪಿಗಳು, ಯಾವುದೋ ದೇಶದ ಪರವಾದ, ಸಾಮಾಜಿಕ ಕಳಕಳಿಯ ಹೋರಾಟಗಳಲ್ಲಿ ಬಂಧನವಾಗಿ ಬಿಡುಗಡೆಯಾಗಿರುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡುವುದರ ಮೂಲಕ ಕೆಟ್ಟ ಸಂದೇಶ ರವಾನಿಸಿದ್ದಾರೆ.

ಇದು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ. ಈ ರೀತಿಯ ವರ್ತನೆ ತೋರಿದ ವ್ಯಕ್ತಿಗಳ ಜಾಮೀನು ಈ ಕೂಡಲೇ ವಜಾಗೊಳಿಸುವ ನಿಟ್ಟಿನಲ್ಲಿ ಕಾನೂನು ಕ್ರಮವನ್ನು ಜರುಗಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತದೆ ಎಂದು ಎಬಿವಿಪಿ ಉತ್ತರ ಪ್ರಾಂತದ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net