ಗ್ಯಾಂಗ್ ರೇಪ್ ಆರೋಪಿಗಳು ಮತ್ತೆ ಜೈಲಿಗೆ; ಏಳು ಆರೋಪಿಗಳು ಏಳು ದಿನ ನ್ಯಾಯಾಂಗ ವಶಕ್ಕೆ; ಶಿರಾಳಕೊಪ್ಪದಲ್ಲಿ ಮೂವರ ಬಂಧನ

23 HVR 3 A
Published on

ಹಾವೇರಿ: ಜಾಮೀನು ಸಿಗುತ್ತಿದ್ದಂತೆ ಜೈಲಿನಿಂದ ಅಕ್ಕಿಆಲೂರವರೆಗೆ ರೋಡ್ ಶೋ ನಡೆಸಿದ್ದ ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣದ ಮೂವರು ಆರೋಪಿತರನ್ನು ಪೊಲೀಸರು ಶನಿವಾರ ಬಂಧಿಸಿದ್ದು, ಏಳೂ ಆರೋಪಿಗಳನ್ನು ಮತ್ತೆ ಏಳು ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಮೂಲಕ ಜೈಲಿನಿಂದ ಖುಷಿಯಿಂದ ಬಂದವರು ಮತ್ತೆ ಜೈಲು ಕಂಬಿ ಎಣಿಸುವಂತಾಗಿದೆ.

ಅಕ್ಕಿಆಲೂರಿನ ಅಫ್ತಾಬ್ ಚಂದನಕಟ್ಟಿ, ಮದರಸಾಬ್ ಮಂಡಕ್ಕಿ, ಸಮಿವುಲ್ಲಾ ಲಾಲನವರ್, ಮಹಮ್ಮದ್ ಸಾದಿಕ್ ಅಗಸಿಮನಿ, ಶೊಯಿಬ್ ಮುಲ್ಲಾ, ತೌಸಿಫ್ ಚೋಟಿ, ರಿಯಾಜ್ ಸಾವಿಕೇರಿ ಬಂಧಿತ ಆರೋಪಿಗಳು.

ರೋಡ್ ಶೋ ನಡೆಸಿ, ವಿಡಿಯೋ ಹಂಚಿಕೊಂಡಿದ್ದ ಆರೋಪಿಗಳ ಕುರಿತು ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸುದ್ದಿ ಬಿತ್ತರಿಸುತ್ತಿದ್ದಂತೆ ಎಚ್ಚೆತ್ತ ಹಾನಗಲ್ಲ ಠಾಣೆ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಮೂವರನ್ನು ಶನಿವಾರ ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಬಂಧಿಸಿದ್ದಾರೆ. ನಂತರ ನ್ಯಾಯಾಧೀಶರ ಎದುರು ಹಾಜರುಪಡಿಸಿ, ಜೂನ್ 2ರವರೆಗೆ ನ್ಯಾಯಾಂಗ ವಶಕ್ಕೆ ಪಡೆದಿದ್ದಾರೆ. ಗ್ಯಾಂಗ್ ರೇಪ್ ಕೇಸ್ ಜಾಮೀನು ರದ್ದತಿ ಕುರಿತು ಜಿಲ್ಲಾ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net