

ಹಾವೇರಿ: ಹಾನಗಲ್ಲ ತಾಲೂಕು ಬ್ಯಾಗವಾದಿ ಗ್ರಾಮದ ಮಹಿಳೆ ಲಕ್ಕವ್ವ ಬೆಟಗೇರಿ ಅಮಾಯಕ ಬಾಲಕಿ, ಯುವತಿಯರನ್ನು ಕರೆತಂದು ಮಾರಾಟ ಮಾಡುತ್ತಿದ್ದಳೆಂಬ ವಿಷಯ ತಿಳಿದ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಮಾಜಿ ಶಾಸಕ ಶಿವರಾಜ ಸಜ್ಜನರ ನೇತೃತ್ವದ ತಂಡ ಗುರುವಾರ ಬ್ಯಾಗವಾದಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿತು.
ಬಸ್ ನಿಲ್ದಾಣ ಮತ್ತಿತರ ಸ್ಥಳಗಳಲ್ಲಿ ಓಡಾಡುತ್ತಿದ್ದ ಲಕ್ಕವ್ವ ಅಮಾಯಕ ಯುವತಿಯರು, ಬಾಲಕಿಯರನ್ನು ಪುಸಲಾಯಿಸಿ ಕರೆತಂದು ಮಾರಾಟ ಮಾಡುತ್ತಿದ್ದಳು. ಮನೆಯಲ್ಲಿ 13 ವರ್ಷದ ಅಪ್ರಾಪ್ತೆಯನ್ನು ಅಕ್ರಮವಾಗಿ ಕೂಡಿ ಇಟ್ಟಿದ್ದಳು ಎಂಬ ಗ್ರಾಮಸ್ಥರ ಆರೋಪದ ಕುರಿತು ‘ವಿಜಯವಾಣಿ’ ವಿಸ್ತೃತ ವರದಿ ಮೂಲಕ ಬೆಳಕಿಗೆ ತಂದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ತಂಡ ಭೇಟಿ ನೀಡಿ, ಸ್ಥಳೀಯರೊಂದಿಗೆ ಸಭೆ ನಡೆಸಿ, ಗ್ರಾಮಸ್ಥರೊಂದಿಗೆ ಚರ್ಚಿಸಿತು.
ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಮಾಜಿ ಶಾಸಕ ಶಿವರಾಜ ಸಜ್ಜನರ ಹಿರಿಯ ಪೋಲಿಸ್ ಅಧಿಕಾರಿಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಘಟನೆಯನ್ನು ಗಂಭಿರವಾಗಿ ಪರಿಗಣಿಸಬೇಕು. ಈ ಪ್ರಕರಣವನ್ನು ಗಮನಿಸಿದರೆ ಯುವತಿಯರ ಕಳ್ಳ ಸಾಗಾಣಿಕೆ ನಡೆಯುತ್ತಿರುವ ಅನುಮಾನ ಕಂಡುಬರುತ್ತಿದೆ. ಆದ್ದರಿಂದ ಆರೋಪಿತ ಮಹಿಳೆಯನ್ನು ಹಾಗೂ ಅವಳಿಗೆ ಸಹಾಯಕರಾಗಿದ್ದ ಕುಟುಂಬದ ಇತರ ಸದಸ್ಯರನ್ನು ವಿಚಾರಣೆಗೆ ಒಳಪಡಿಸಬೇಕು. ಒಂದು ವೇಳೆ ಸಮಗ್ರ ತನಿಖೆ ನಡೆಸದಿದ್ದರೆ ಪೋಲಿಸ್ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಪ್ರದೀಪ ಮುಳ್ಳೂರ, ಹಾನಗಲ್ಲ ಮಂಡಲ ಅಧ್ಯಕ್ಷ ಮಹೇಶ ಕಮಡೊಳ್ಳಿ, ಮಂಡಲ ಪ್ರಧಾನ ಕಾರ್ಯದರ್ಶಿ ಸಚಿನ ರಾಯಣ್ಣನವರ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮಹೇಶ ಬಣಕಾರ, ತಾಪಂ ಮಾಜಿ ಅಧ್ಯಕ್ಷ ರೇಣುಕಮ್ಮ ತಿಮ್ಮಾಪೂರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಮಾಯಕ್ಕನವರ, ಮಾಲತೇಶ ಗಂಟೇರ, ಮಾರ್ತಾಂಡಪ್ಪ ದೇಸಾಯಿ, ವಿನಯ ಹಿರೇಮಠ ಹಾಗೂ ಗ್ರಾಮಸ್ಥರು ಇದ್ದರು.
ಅಕ್ರಮ ಚಟುವಟಿಕೆಗಳಿಗೆ ಬಳಕೆ ಆರೋಪ
ಆರೋಪಿ ಲಕ್ಕವ್ವ ಬೇಟಗೇರಿ ಬೇರೆ ಬೇರೆ ಸ್ಥಳಗಳಿಂದ ಅಸಹಾಯಕ ಮಹಿಳೆಯರನ್ನು ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಬಂದು ಅಕ್ರಮವಾಗಿ ಕೂಡಿಹಾಕುತ್ತಿದ್ದಳು. ಹಣಕ್ಕಾಗಿ ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದಳು. ಮೊದಲ ಬಾರಿಗೆ ಇವರ ಕೃತ್ಯ ಬೆಳಕಿಗೆ ಬಂದಾಗ ಗ್ರಾಮಕ್ಕೆ ಆಗಮಿಸಿದ್ದ ಪೊಲೀಸರು ಯಾವುದೇ ತನಿಖೆ ಮಾಡದೇ ಆರೋಪಿಯನ್ನು, ಸಂತ್ರಸ್ಥೆಯನ್ನು ಬಿಟ್ಟುಕಳುಹಿಸಿದ್ದರು. ಬಳಿಕ ಮತ್ತೊಮ್ಮೆ ಸಾಕ್ಷಿ ಸಮೇತ ಹಿಡಿದುಕೊಟ್ಟಾಗ ಲಕ್ಕವ್ವಳನ್ನು ಮಾತ್ರ ಬಂಧಿಸಿ, ಆಕೆಗೆ ಸಹಾಯಕರಾಗಿದ್ದ ಕುಟುಂಬದ ಇತರ ಸದಸ್ಯರನ್ನು ಬಂಧಿಸದೇ ಬಿಡಲಾಗಿದೆ. ಹೀಗಾಗಿ ಪೊಲೀಸರು ಪರೋಕ್ಷವಾಗಿ ಆರೋಪಿ ಲಕ್ಕವ್ವ ಬೇಟಗೇರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಸಭೆಯಲ್ಲಿ ಆರೋಪಿಸಿದರು.