ಬಾಳಂಬೀಡ ಗ್ರಾಪಂನಿಂದ ಹಣ ದುರುಪಯೋಗ ಆರೋಪ; ತನಿಖೆ ನಡೆಸಿ ಕ್ರಮ ಜರುಗಿಸಲು ಡಿಎಸ್‌ಎಸ್ ಆಗ್ರಹ

7 HVR 7
Published on

ಹಾವೇರಿ: ಜಿಲ್ಲೆಯ ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮ ಪಂಚಾಯಿತಿಯಲ್ಲಿ 2021ರಿಂದ 2024ವರೆಗೆ 14, 15ನೇ ಹಣಕಾಸು ಯೋಜನೆ ಅಡಿಯಲ್ಲಿ ಸಾರ್ವಜನಿಕ ಹಣ ದುರುಪಯೋಗ ಪಡೆಸಿಕೊಂಡ ಆರೋಪ ಕೇಳಿ ಬಂದಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಈ ಕುರಿತು ಹಾವೇರಿಯ ಜಿಪಂ ಕಚೇರಿಯಲ್ಲಿ ಬುಧವಾರ ಡಿಎಸ್‌ಎಸ್ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಬಾಳಂಬೀಡ ಗ್ರಾಮ ಪಂಚಾಯಿತಿಯಲ್ಲಿ 2021-2024 ವರೆಗಿನ 14, 15ನೇ ಹಣಕಾಸು ಯೋಜನೆ ಅಡಿ ಸಾರ್ವಜನಿಕ ಹಣ ದುರುಪಯೋಗ ಮಾಡಲಾಗಿದೆ. ಕುಡಿಯುವ ನೀರು, ಬೊರವೆಲ್ ದುರಸ್ತಿ, ವಿದ್ಯುತ್ ಬಿಲ್, ಚರಂಡಿ ದುರಸ್ತಿ ಹಾಗೂ ಸ್ವಚ್ಛತೆ, ಬೀದಿ ದೀಪ, ನೈರ್ಮಲೀಕರಣ, ಹೈಮಾಸ್ಟ್ ಬೀದಿ ದೀಪ ಸಾಮಗ್ರಿಗಳ ಖರೀದಿ, ಮಿನಿ ವಾಟರ್ ನಿರ್ವಹಣೆ ಕಾಮಗಾರಿಗಳಿಗೆ ಬಳಸಬೇಕಾದ ಹಣದಲ್ಲಿ ಯಾವುದನ್ನೂ ಸರಿಯಾಗಿ ನಿರ್ವಹಣೆ ಮಾಡದಿರುವುದು ಕಂಡು ಬರುತ್ತಿದೆ. ಹಣ ಖರ್ಚು ಹಾಕಿ ಸಾರ್ವಜನಿಕರ ಹಣ ದುರುಪಯೋಗ ಪಡಿಸಿಕೊಂಡ ಆರೋಪಗಳ ಅಂಶಗಳನ್ನು ತಾವುಗಳು ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ಮಂಜಪ್ಪ ಮಾರೋಳ, ವೈ.ಎನ್.ಮಾಸೂರ, ಜಗದೀಶ ಹರಿಜನ, ಮಂಜುನಾಥ ದೊಡ್ಡಮರಿಯಮ್ಮನವರ, ಮಹೇಶಪ್ಪ ಶಾಕಾರ, ಶಿವು ಮುದಿಮಲ್ಲಣ್ಣವರ, ರೇಣುಕಾ ಬಡಕಣ್ಣವರ, ಬಸವಣ್ಣಪ್ಪ ಅರಳಿಹಳ್ಳಿ, ಶಂಭುಲಿಂಗಪ್ಪ ದಿವಟರ, ಕೃಷ್ಣಕಾಂತ ಹೊಳಿಯಪ್ಪನವರ, ಮಂಜುನಾಥ ಮಾಸೂರ, ಹನಮಂತಪ್ಪ ಹೌಶಿ, ಗೀತಾ ಹಳೆಶಿಡೆನೂರ, ರತ್ನವ್ವ ದೊಡ್ಡಮನಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net