ಲಕ್ಕವ್ವನ ಹಿಂದಿದೆ ಯುವತಿಯರ ವ್ಯವಸ್ಥಿತ ಮಾರಾಟ ಜಾಲ !; ಆಕೆಯ ಸಹೋದರ ಬಂಗಾರಪ್ಪ, ಪುತ್ರಿ ಶಿಲ್ಪಾಳ ಬಂಧಿಸಿ; ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಆಗ್ರಹ

Published on

ಹಾವೇರಿ: ಹಾನಗಲ್ಲ ತಾಲೂಕು ಬ್ಯಾಗವಾದಿ ಗ್ರಾಮದ ಆರೋಪಿ ಲಕ್ಕವ್ವ ಬೆಟಗೇರಿ ಹಿಂದೆ ಮಹಿಳೆಯರ ಮತ್ತು ಮಕ್ಕಳ ಮಾರಾಟ ಮಾಡುವ ವ್ಯವಸ್ಥಿತ ಜಾಲ ಇದ್ದು, ಆಕೆಯ ಸಹೋದ ಬಂಗಾರಪ್ಪ ಹಾಗೂ ಪುತ್ರಿ ಶಿಲ್ಪಾ ಕೂಡ ಈಕೆಯ ತಂಡದಲ್ಲಿದ್ದಾರೆ. ಇವರನ್ನು ಪೊಲೀಸರು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಎಲ್ಲ ಸಂತ್ರಸ್ಥರಿಗೆ ನ್ಯಾಯ ಕೊಡಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಗವಾದಿ ಗ್ರಾಮಕ್ಕೆ ಬಿಜೆಪಿ ಜಿಲ್ಲಾ ತಂಡ ಭೇಡಿ ಮಾಡಿ ಗ್ರಾಮಸ್ಥರನ್ನು ಹಾಗೂ ಸಂತ್ರಸ್ಥ ಬಾಲಕಿಯನ್ನು ವಿಚಾರಿಸಿದಾಗ ಬೆಚ್ಚಿ ಬೀಳಿಸುವ ಅಂಶಗಳು ಗಮನಕ್ಕೆ ಬಂದಿವೆ. ಹಲವು ವರ್ಷಗಳಿಂದ ಯುವತಿಯರ ಮಾರಾಟ ಮಾಡುತ್ತಿದ್ದಾಳೆ. ಎರಡು ವರ್ಷದಲ್ಲಿ ಲಕ್ಕವ್ವ ಹೊಲ, ಮನೆ, ಸೇರಿ ದೊಡ್ಡ ಆಸ್ತಿ ಮಾಡಿದ್ದಾಳೆ. ಇದಕ್ಕೆ ತಾಲೂಕಿನ ಪ್ರಭಾವಿಗಳು ಹಾಗೂ ಪೊಲೀಸರ ಬೆಂಬಲವಿರುವ ಆರೋಪ ಕೇಳಿ ಬಂದಿದೆ. ಲಕ್ಕವ್ವನ ಸಹೋದರ ಬಂಗಾರಪ್ಪ, ಮಗಳು ಶಿಲ್ಪಾ ಒಟ್ಟಾಗಿ ಕೃತ್ಯ ಎಸಗುತ್ತ ಬಂದಿದ್ದಾರೆ ಎಂದು ದೂರಿದರು.

13 ವರ್ಷದ ಬಾಲಕಿಯ ಕೂದಲು ಕತ್ತರಿಸಿ, ರೂಮಲ್ಲಿ ಕೂಡಿ ಹಾಕಿ, ಹಲ್ಲೆ ನಡೆಸಿದ್ದಾರೆ. ಲಕ್ಕವ್ವ ಚಿಕ್ಕಮಗಳೂರಿನ ಯುವತಿಯನ್ನು ಕರೆತಂದು ಕೂಡಿ ಹಾಕಿದ್ದ ವಿಷಯವನ್ನು ಪೊಲೀಸರು ಮುಚ್ಚಿ ಹಾಕುವ ಮೂಲಕ ಹುನ್ನಾರ ನಡೆಸಿದ್ದಾರೆ. ಕೇವಕ 13 ವರ್ಷದ ಬಾಲಕಿಯ ಕೂಡಿ ಹಾಕಿದ್ದ ಕುರಿತು ಕೇಸ್ ಮಾಡಿ ಪೊಲೀಸರು ಕೇಸ್ ಮುಚ್ಚಿಹಾಕುವ ಹುನ್ನಾರ ನಡೆಸಿದ್ದಾರೆ. ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಪುಡಾರಿಗಳ ಮೇಲೆ ಹಲ್ಲೆ ಮಾಡುವುದು ನಡೆದಿವೆ. ಇದು ಹಾನಗಲ್ಲ ತಾಲೂಕಿನ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಲಕ್ಕವ್ವ ಸಹೋದರ, ಮಗಳನ್ನು ಬಂಧಿಸಿ ಸಂಪೂರ್ಣ ಪ್ರಕರಣ ಭೇದಿಸದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಜಿಲ್ಲೆಯಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಸರ್ಕಾರ ಕುಮ್ಮಕ್ಕು ಕೊಟ್ಟಿದೆ. ಆರೋಪಿಗಳ ರಕ್ಷಣೆಗೆ ನಿಂತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಮಹಿಳೆಯರು ರೈತರ ರಕ್ಷಣೆ ಮರೆತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಾವೆಮುಲ್ ಮಾಜಿ ಅಧ್ಯಕ್ಷ ಬಸವರಾಜ ಅರಬಗೊಂಡ, ನಾಗೇಂದ್ರ ಕಡಕೋಳ, ಗವಿಸಿದ್ದಪ್ಪ ದ್ಯಾಮಣ್ಣನವರ, ಜಗದೀಶ ಬಸೇಗೆಣ್ಣಿ, ಡಾ.ಶೋಭಾ ನಿಸ್ಸಿಮಗೌಡ್ರ, ಪರಮೇಶಪ್ಪ ಮೇಗಳಮನಿ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಇತರರಿದ್ದರು.

ಕುಖ್ಯಾತಿಯಲ್ಲಿ ಜಿಲ್ಲೆ ನಂಬರ್ ಒನ್

ರೈತರ ಆತ್ಮಹತ್ಯೆ, ಭ್ರಷ್ಟಾಚಾರ, ಗ್ಯಾಂಗ್‌ರೇಪ್, ಹೆಣ್ಣು ಮಕ್ಕಳ ಮಾರಾಟ, ದನಗಳ ಸಾಗಣೆ ಎಲ್ಲದರಲ್ಲೂ ಹಾವೇರಿ ಜಿಲ್ಲೆ ನಂಬರ್ ಒನ್ ಆಗುತ್ತಿದೆ. ಈ ಬಗ್ಗೆ ಕಾಂಗ್ರೆಸ್‌ನ ಆರು ಶಾಸಕರ ಪೈಕಿ ಯಾರೊಬ್ಬರೂ ಮಾತನಾಡುತ್ತಿಲ್ಲ. ಜಿಲ್ಲೆಯಲ್ಲಿ ಇಸ್ಪೀಟ್, ಮಟಕಾ ಜೂಜುಕೋರರ ಹಾವಳಿ ಹೆಚ್ಚಾಗಿದೆ. ಪ್ರತಿ ತಿಂಗಳು ಜೂಜುಕೋರರು ಪ್ರತಿ ತಾಲೂಕಿಗೆ 25 ಲಕ್ಷ ರೂ. ಕೊಡುತ್ತಿದ್ದಾರೆ. ಶಾಸಕರು, ಸಚಿವರು ಕೇವಲ ಆದಾಯ ನೋಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇಂತಹ ಕೆಲಸ ಮಾಡಲೆಂದೇ ಹಾನಗಲ್ಲ ಶಾಸಕರಿಗೆ ಆಪದ್ಬಾಂದವ ಎನ್ನುತ್ತಾರೆ ಏನೋ ಗೊತ್ತಿಲ್ಲ ಎಂದು ಶಿವರಾಜ ಸಜ್ಜನರ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net