

ಹಾವೇರಿ: ಹಾನಗಲ್ಲ ತಾಲೂಕಿನ ಆಡೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಲಕನ ಕೆನ್ನೆಯ ಗಾಯಕ್ಕೆ ಫೆವಿಕ್ವಿಕ್ ಹಚ್ಚಿ ಚಿಕಿತ್ಸೆ ನೀಡಿದ ನರ್ಸ್ ಕುರಿತ ಪ್ರಕರಣದ ಸಮಗ್ರ ವರದಿ ನೀಡುವಂತೆ ಆರೋಗ್ಯ ಇಲಾಖೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದೆ.
ಜ.14ರಂದು ಗುರುಕಿಶನ್ ಹೊಸಮನಿ ಎಂಬ ಬಾಲಕ ಆಟವಾಡುವಾಗ ಕೆನ್ನೆಯ ಮೇಲೆ ಗಾಯ ಮಾಡಿಕೊಂಡಿದ್ದ. ಈ ಗಾಯಕ್ಕೆ ಹೊಲಿಗೆ ಹಾಕಿ ಚಿಕಿತ್ಸೆ ನೀಡುವ ಬದಲಿಗೆ ನರ್ಸ್ ಜ್ಯೋತಿ ಎಂಬುವರು ಫೆವಿಕ್ವಿಕ್ ಗಮ್ ಅಂಟಿಸಿ ಚಿಕಿತ್ಸೆ ನೀಡಿದ್ದರು. ಪಾಲಕರು ಆಡೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿದ್ದರು. ಈ ಕುರಿತು ‘ವಿಜಯವಾಣಿ’ ಫೆ.5ರಂದು ವರದಿ ಪ್ರಕಟಿಸಿತ್ತು.
ವರದಿ ಬೆನ್ನಲ್ಲೇ ಆರೋಗ್ಯ ಇಲಾಖೆ ಪ್ರಿನ್ಸಿಪಲ್ ಸೆಕ್ರೆಟರಿ ಡಾ.ಹರ್ಷಗುಪ್ತಾ, ಮತ್ತಿತರ ಅಧಿಕಾರಿಗಳು ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಎಚ್‌ಒ, ಇತರ ಅಧಿಕಾರಿಗಳ ಸಭೆ ನಡೆಸಿದರು. ಘಟನೆ ಕುರಿತು ಸಮಗ್ರ ವರದಿ ಸಲ್ಲಿಸಿ, ಕೂಡಲೇ ಸೂಕ್ತ ಕ್ರಮ ಜರುಗಿಸಿ ಎಂದು ಡಿಎಚ್‌ಗೆ ಸೂಚಿಸಿದ್ದಾರೆ.
ನಿರ್ದೇಶಕರಿಗೆ ಪತ್ರ :
ಗಾಯಕ್ಕೆ ಫೆವಿಕ್ವಿಕ್ ಅಂಟಿಸಿದ ನರ್ಸ್ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನನಗಿಲ್ಲ. ಈ ಕುರಿತು ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ. ಸದ್ಯದಲ್ಲೇ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಡಿಎಚ್‌ಒ ಡಾ.ರಾಜೇಶ ಸುರಗಿಹಳ್ಳಿ ತಿಳಿಸಿದ್ದಾರೆ.