ಕಾರ್ಮಿಕರಿಗೆ ಸರ್ಕಾರ ಸಾಮಾಜಿಕ ಭದ್ರತೆ ಒದಗಿಸಲಿ; ಹಮಾಲಿ ಕಾರ್ಮಿಕ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಆಗ್ರಹ

24 HVR 3 B
Published on

ಹಾವೇರಿ: ರಾಜ್ಯವ್ಯಾಪಿ ಎಪಿಎಂಸಿ, ವೇರ್ ಹೌಸ್, ಮಿಲ್ ಗೋಡೌನ್, ಗೂಡಶೆಡ್, ಬಜಾರ್, ಸೇರಿದಂತೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಹಮಾಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಹಮಾಲಿ ಕಾರ್ಮಿಕ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಆಗ್ರಹಿಸಿದರು.
ನಗರದ ಎಪಿಎಂಸಿ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಅ.29ರಂದು ಸವದತ್ತಿಯಲ್ಲಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ನಡೆಯಲಿರುವ ‘ಎಪಿಎಂಸಿ ಹಮಾಲಿ ಕಾರ್ಮಿಕರ ರಾಜ್ಯ ಸಮಾವೇಶ’ದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ರೈತರು, ಕಾರ್ಮಿಕರು ಹಾಗೂ ವ್ಯಾಪಾರಸ್ಥರ ವಿರೋಧಿಯಾಗಿದ್ದ ಈ ಹಿಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯ ಜಾರಿಯಿಂದಾಗಿ ಒಂದು ಲಕ್ಷದಷ್ಟು ಹಮಾಲಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದರು. ಕೃಷಿ ಉತ್ಪನ್ನಗಳ ಅವಕ, ಆದಾಯವಿಲ್ಲದೆ ಎಪಿಎಂಸಿಗಳು ಬಂದ್ ಆಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಸ್ತುತ ಈ ಕಾಯ್ದೆಯನ್ನು ವಾಪಸ್ ಪಡೆಯಲು ಮುಂದಾಗಿದ್ದು ಸ್ವಾಗತಾರ್ಹವಾಗಿದೆ ಎಂದರು.
ರಾಜ್ಯದ ಮಾರುಕಟ್ಟೆಗಳಲ್ಲಿ ಹಮಾಲಿ ಕಾರ್ಮಿಕರ ಉದ್ಯೋಗದ ಪರಿಸ್ಥಿತಿ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ಜಾರಿಯಾಗುತ್ತಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಇನ್ನಷ್ಟು ಬಲಪಡಿಸುವುದು, ನನೆಗುದಿಗೆ ಬಿದ್ದಿರುವ ನಿವೃತ್ತಿ ಪರಿಹಾರ, ವಸತಿ, ಕನಿಷ್ಠ ವೇತನ ಜಾರಿ ಮುಂತಾದ ಹಕ್ಕೊತ್ತಾಯಗಳು, ಸಂಘಟನಾ ಜಾಗೃತಿ ಮುಂತಾದ ವಿಷಯಗಳ ಬಗ್ಗೆ ಈ ಸಮಾವೇಶವು ಚರ್ಚೆ ನಡೆಸಲಿದ್ದು ಮುಂದಿನ ಹೋರಾಟ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದರು.
ರಾಜ್ಯ ಜಂಟಿ ಕಾರ್ಯದರ್ಶಿ ಗುರುಸಿದ್ದಪ್ಪ ಅಂಬಿಗೇರ ಮಾತನಾಡಿ, ಸಮಾವೇಶವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಲಿದ್ದು, ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ವಿಶ್ವಾಸ ವೈದ್ಯ, ಕೃಷಿ ಮಾರಾಟ ಇಲಾಖೆ ನಿರ್ದೇಶಕ ಜಿ.ಎಂ.ಗಂಗಾಧರಸ್ವಾಮಿ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ ಪಾಟೀಲ, ಕರ್ನಾಟಕ ಪಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ಫೆಡರೇಶನ್ ರಾಜ್ಯಾಧ್ಯಕ್ಷ ಕೆ. ಮಹಾಂತೇಶ, ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಎಪಿಎಂಸಿ ಹಮಾಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಕರಿಯಪ್ಪ ಲಿಂಗದಳ್ಳಿ, ಗುಡ್ಡಪ್ಪ ಮಾಳಗಿ, ಹನಮಂತಪ್ಪ ಕನಕಾಪುರ, ರಾಜು ಮಾಳಮ್ಮನವರ, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net