ಮಕ್ಕಳ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು; ಹಳೆರಿತ್ತಿಯಲ್ಲಿ ಮಕ್ಕಳಿಗೆ ಲೆಟ್ಸ್ ಹೆಲ್ಪ್ ಪೀಪಲ್ ಟ್ರಸ್ಟ್‌ನಿಂದ ಕಲಿಕೋಪಕರಣ ವಿತರಣೆ

10 HVR 3
Published on

ಹಾವೇರಿ: ಮಕ್ಕಳು ಭವಿಷ್ಯದ ಉತ್ತರಾಧಿಕಾರಿಗಳು. ಅವರಲ್ಲಿರುವ ಕೀಳರಿಮೆಗಳನ್ನು ಬಿಡಿಸಿ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಬೆಂಗಳೂರಿನ ಲೆಟ್ಸ್ ಹೆಲ್ಪ್ ಪೀಪಲ್ ಟ್ರಸ್ಟ್ ಸಂಸ್ಥಾಪಕ ಎಸ್.ಎಲ್.ಪಾಟೀಲ ಹೇಳಿದರು.
ತಾಲೂಕಿನ ಹಳೆರಿತ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಲೆಟ್ಸ್ ಹೆಲ್ಪ್ ಪೀಪಲ್ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಕಲಿಕೋಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮೂವರು ವಿದ್ಯಾರ್ಥಿಗಳಿಗೆ ನಗದು ಹಾಗೂ 15,000 ದತ್ತಿನಿಧಿಗೆ ಚೆಕ್ ಮುಖ್ಯಾಧ್ಯಾಪಕರಿಗೆ ನೀಡಿ ಜ್ಞಾನಾಭಿವೃದ್ಧಿಗೆ ಇಂಗ್ಲಿಷ್ ಕಲಿಕೆ ಅಗತ್ಯ. ಸಂವಹನ ಕಲೆಯನ್ನು ರೂಢಿಸಿ ಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಿಕ್ಷಣ ಸಂಯೋಜಕ ಓಂಪ್ರಕಾಶ ಎತ್ತಿನಹಳ್ಳಿ ಮಾತನಾಡಿ, ಇಂಗ್ಲಿಷ್, ಗಣಿತ, ವಿಜ್ಞಾನ ಮಕ್ಕಳಿಗೆ ಕಬ್ಬಿಣದ ಕಡಲೆಯಲ್ಲ. ಗಣಿತದಲ್ಲಿ ಆಸಕ್ತಿ ವಹಿಸಬೇಕು. ವಿಜ್ಞಾನ ನಿಂತಿರುವುದೇ ಗಣಿತದ ಮೇಲೆ ಎಂದರು.
ನಿಜಲಿಂಗಪ್ಪ ಬಸೇಗೆಣ್ಣಿ ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಣವೆಂಬುದು ಸಂಸ್ಕಾರವಾಗಬೇಕೆ ಹೊರತು ಬರಿ ಸರ್ಟಿಫಿಕೇಟ್ ಆಗಿ ಉಳಿಯಬಾರದು. ನಿಮ್ಮ ಜೀವನ ನೀವೇ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಹನುಮಂತಗೌಡ ಗೊಲ್ಲರ ಮಾತನಾಡಿ, ಹಸಿದವರಿಗೆ ನೀಡಿದ ಅನ್ನ, ಬಯಸಿದವರಿಗೆ ನೀಡಿದ ದಾನ, ಅವಶ್ಯವಿದ್ದವರಿಗೆ ಮಾಡಿದ ಸಹಾಯ, ಸಾವಿನ ನಂತರ ನಮ್ಮನ್ನು ಬದುಕಿಸಬಲ್ಲ ಸಂಜೀವಿನಿಯಾಗಿದೆ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಷಯವಾರು ಅತಿ ಹೆಚ್ಚು ಫಲಿತಾಂಶ ಪಡೆದುಕೊಳ್ಳಲು ಕಾರಣರಾದ ಜಿ.ಎನ್.ಭಗವಂತಗೌಡ್ರ ಹಾಗೂ ವಸಂತ ಮೆಳ್ಳಳ್ಳಿ ಶಿಕ್ಷಕರನ್ನು ಗೌರವಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಯಲ್ಲಪ್ಪ, ಹೇಮನಗೌಡ ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು. ವಸಂತ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಎಚ್.ಟಿ.ಭರಮಗೌಡ್ರ, ಸಿ.ಆರ್.ಪಿ ಎಂ.ಕೆ.ಬಾರ್ಕಿ ಮಾತನಾಡಿದರು. ನಳನಿ ಕೆ.ಎಸ್ ನಿರೂಪಿಸಿದರು. ಕಾಂಚನಾ ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net