ಸಮೀಕ್ಷೆಯಲ್ಲಿ ಹಡಪದ ಎಂದೇ ಬರೆಸಿ; ಶ್ರೀ ಹಡಪದ ಅಪ್ಪಣ್ಣ ಸೇವಾ ಸಂಘದ ಮನವಿ

23 Hadapada
Published on

ಹಾವೇರಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಹಡಪದ ಅಪ್ಪಣ್ಣ ಸಮಾಜದವರು ಧರ್ಮ ಕಾಲಂನಲ್ಲಿ ಹಿಂದು ಎಂದು ಹಾಗೂ ಜಾತಿ ಕಾಲಂನಲ್ಲಿ ಹಡಪದ (ಎ-0445) ಎಂದು ಬರಸಬೇಕು ಎಂದು ಶ್ರೀ ಹಡಪದ ಅಪ್ಪಣ್ಣ ಸೇವಾ ಸಂಘದ ಜಿಲ್ಲಾಧ್ಯಕ್ಷ ಷಣ್ಮುಖಪ್ಪ ಕಾಯಕದ ಮನವಿ ಮಾಡಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.9ರಂದು ತಂಗಡಗಿಯ ಶ್ರೀ ಹಡಪದ ಅಪ್ಪಣ್ಣ ದೇವರ ಮಹಾ ಸಂಸ್ಥಾನ ಮಠದಲ್ಲಿ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿಯವರ ನೇತೃತ್ವದಲ್ಲಿ ಸಮಾಜದ ಮುಖಂಡರ ಸಭೆ ನಡೆಸಲಾಯಿತು. ಸಮೀಕ್ಷೆಯಲ್ಲಿ ಏನು ಬರೆಸಬೇಕು ಎಂಬ ಕುರಿತು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಪ್ರಕಾರ ಸಮಾಜದವರು ಬರೆಸಬೇಕು ಎಂದರು.

ತಾಲೂಕು ಅಧ್ಯಕ್ಷ ಅಣ್ಣಪ್ಪ ಚೌರದ ಮಾತನಾಡಿ, ಹಡಪದ ಎಂದು ಜಾತಿ ಕಾಲಂನಲ್ಲಿ ಬರೆಸಿದರೆ 2ಎ ಮೀಸಲಾತಿ ಸೌಲಭ್ಯ ಸಿಗುತ್ತದೆ. ಹಾಗಾಗಿ, ಹಡಪದ ಎಂದೇ ಬರೆಸಬೇಕು. ಈ ಮೊದಲು ಹಡಪದ ಅಪ್ಪಣ್ಣ ಸಮಾಜದ ಹಲವರು ಲಿಂಗಾಯತ ಎಂದು ಬರೆಸುತ್ತಿದ್ದರು. ಇದರಿಂದ ಮೀಸಲಾತಿಯಿಂದ ವಂಚಿತರಾಗುತ್ತಿದ್ದರಲ್ಲದೇ ಸಮಾಜದ ಸಂಖ್ಯೆ ಕಡಿಮೆ ಇದೆ ಎಂದು ಹೇಳಲಾಗುತ್ತಿತ್ತು. ಈ ಸಮೀಕ್ಷೆಯಲ್ಲಿ ಎಲ್ಲರೂ ಹಡಪದ ಎಂದು ಬರೆಸಿದರೆ ನಮ್ಮ ಸಮಾಜದ ನಿರ್ದಿಷ್ಟ ಸಂಖ್ಯೆಯೂ ತಿಳಿಯುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬಣ್ಣ ಕ್ಯಾಲಕೊಂಡ, ಖಜಾಂಚಿ ಬಸವರಾಜ ಕಾಯಕದ, ಬಸವರಾಜ ಹಡಪದ, ಬಸವರಾಜ ಅಪ್ಪಣ್ಣನವರ, ದುಂಡೆಪ್ಪ ಕಾಯಕದ, ವಿರುಪಾಕ್ಷಪ್ಪ ಹಡಪದ, ಶಿವಕುಮಾರ ಮಡ್ಲಿಕರ, ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net