

ಹಾವೇರಿ: ಶರಣರ ಚಿಂತನೆ ಸಾಮಾಜಿಕ ನ್ಯಾಯದ ರಹದಾರಿಯಲ್ಲಿ, ಬಸವಣ್ಣನವರ ಆಪ್ತರಾಗಿ ಅನುಭವ ಮಂಟಪದ ಆಧ್ಯಾತ್ಮಿಕ ಚೇತನ, ಧೀರ ದಿಟ್ಟ ನಡೆಯಲ್ಲಿ ವಚನಗಳ ಸಂರಕ್ಷಣೆಗೆ ಕಂಕಣಬದ್ಧರಾಗಿ ವಚನಕಾರರ ಕ್ರಾಂತಿಯನ್ನು ಸಾರುವ ವೈಚಾರಿಕ ಶರಣ ಹಡಪದ ಅಪ್ಪಣ್ಣ ನಾಟಕ ನೋಡುಗರ ಅಂತರಂಗವನ್ನು ಅರಳಿಸಿತು.
ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಷತ್ತು, ಬಸವ ಬಳಗ, ಕನ್ನಡತಿ ಕಲಾ ತಂಡದಿಂದ ಇತ್ತೀಚೆಗೆ ಆಯೋಜಿಸಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಕನ್ನಡತಿ ಕಲಾ ತಂಡದಿಂದ ಜರುಗಿದ ‘ವೈಚಾರಿಕ ಶರಣ ಹಡಪದ ಅಪ್ಪಣ್ಣ ನಾಟಕ’ ಪ್ರದರ್ಶನ ಜರುಗಿತು.
12ನೇ ಶತಮಾನದ ಶರಣರ ಹೋರಾಟ, ಸಮಾನತೆಗಾಗಿ ಪಟ್ಟ ಸಂಕಷ್ಟ, ಬಸವಣ್ಣನವರ ಆದರ ಆತಿಥ್ಯ, ಮೇಲು ಕೀಳಿಲ್ಲದ ಮಾನವ ಧರ್ಮದ ಅರಿವು, ಹೆಣ್ಣು ಗಂಡೆಂಬ ಭೇದವಿಲ್ಲದೆ ಎಲ್ಲರನ್ನೂ ಮನುಷ್ಯರಾಗಿ ನೋಡುವ ಸತ್ಯ ಸಂಕಲ್ಪವನ್ನು ಸಾರಿ ಹೇಳಿತು.
ಬದುಕೆಂಬುದು ಪರೋಪಕಾರದ ಜತೆಗೆ ಕೂಡಿ ಬಾಳುವ, ಎಲ್ಲರ ನೋವಿನಲ್ಲಿ ನಾವು ಸಾಂತ್ವನದ ಸಹಕಾರ ನೀಡುವ, ಸಹಕಾರ ಧರ್ಮದಲ್ಲಿ ನಂಬಿಗೆ ಇಡುವ, ಸತ್ಯಶೀಲ ಬದುಕಿಗೆ ಎಲ್ಲರೂ ಸಾಕ್ಷಿಯಾಗಬೇಕು. ಗುರುಲಿಂಗ ಜಂಗಮ ಪ್ರೇಮದ ನಡೆನುಡಿ ನಮ್ಮದಾಗಬೇಕು. ಒಳಿತಿಗಾಗಿ ಅಂಜದ ಅಳುಕದ ನಡೆ ನಮ್ಮದಾಗಬೇಕು ಎಂಬ ಸತ್ಯವನ್ನು ನಾಟಕ ಸಾರಿತು.
ನಾಟಕದಲ್ಲಿ ಕಲಾವಿದರಾದ ಪ್ರಶಾಂತ ತಡಸದ, ಷಣ್ಮುಖಪ್ಪ ಹಾದಿಮನಿ ಅವರ ವಚನಗಳ ಗಾಯನ, ನಿರೂಪಣೆ ಗಮನ ಸೆಳೆಯಿತು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿ.ಜಿ.ಯಳಗೇರಿ, ಪರಿಮಳ ಜೈನ್, ಎನ್.ಬಿ.ಕಾಳೆ, ಶಿವಬಸಪ್ಪ ಮುದ್ದಿ, ಕೆ.ಆರ್.ಹಿರೇಮಠ ಮಾತನಾಡಿದರು. ಸಾಮಾಜಿಕ ಸತ್ಯಗಳನ್ನು ವಚನಗಳ ರಚನೆಯೂ ಒಳಗೊಂಡ ಶರಣ ಜೀವನದ ಪರಿಯನ್ನು ನಾಟಕದಲ್ಲಿ ಮನೋಜ್ಞವಾಗಿ ಅಭಿನಯಿಸಲಾಯಿತು. ಹಡಪದ ಅಪ್ಪಣ್ಣನವರ ಸತ್ಯನಿಷ್ಠ, ಕಾಯಕ ಧರ್ಮವನ್ನು ಅಚ್ಚುಕಟ್ಟಾಗಿ ನಿರೂಪಿಸಲಾಗಿದೆ. ಇಂತಹ ನಾಟಕಗಳು ಮನೆ ಮನೆಯ ಮಾತಾಗಿ ಸಾಮಾಜಿಕ ತಲ್ಲಣಗಳನ್ನು ತಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಹಾದಿಯಾಗಬೇಕು ಎಂದರು.
ಓಂಕಾರಣ್ಣನವರ ರಚನೆ
ಶಿಕ್ಷಕ ಜಿ.ಎಂ.ಓಂಕಾರಣ್ಣನವರ ರಚಿಸಿದ ನಾಟಕವನ್ನು ಕಲಾವಿದೆ ಲತಾ ಪಾಟೀಲ ನಿರ್ದೇಶಿಸಿದರು. ಶರಣ ಶರಣೆಯರ ಪಾತ್ರದಲ್ಲಿ ಪ್ರಶಾಂತ ತಡಸದ, ಷಣ್ಮುಖಪ್ಪ ಹಾದಿಮನಿ, ಅನಿತಾ ಉಪಲಿ, ಮಂಜುನಾಥ, ರಂಜನಾ ಭಟ್, ಅಕ್ಕಮಹಾದೇವಿ ಹಾನಗಲ್ಲ, ಚಂದ್ರು ದೊಡ್ಡಮನಿ, ವಿನಯ, ನಾಗರಾಜ ಬೆಂಡೀಗೇರಿ, ಅಣ್ಣಪ್ಪ ಕರಡಿ ಅಭಿನಯಿಸಿದರು.