ಗುತ್ತಲ ಸಾಯಿಚಂದ್ರ ಗುರುಕುಲ ಶಾಲೆಯಲ್ಲಿ ಜು.8ರಂದು ರಾಜ್ಯಮಟ್ಟದ ‘ಸಂಸ್ಕೃತಿ ಮಹೋತ್ಸವ’; ಭುವನ ಮಾಗಾವಿ

Published on

ಹಾವೇರಿ: ತಾಲೂಕಿನ ಗುತ್ತಲ ಪಟ್ಟಣದ ಸಾಯಿಚಂದ್ರ ಗುರುಕುಲ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಜು.8ರಂದು ಬೆಳಗ್ಗೆ 10.30ಕ್ಕೆ ಭಾರತೀಯ ಪಾರಂಪರಿಕ ಕಲೆ, ಸಂಸ್ಕೃತಿ ಬಿಂಬಿಸುವ ಉತ್ಸವ ರಾಜ್ಯಮಟ್ಟದ ‘ಸಂಸ್ಕೃತಿ ಮಹೋತ್ಸವ’ ಆಯೋಜಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ನಿರ್ದೇಶಕ ಭುವನ ಮಾಗಾವಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಪ್‌ಸಿತಾ’ ಎಂಬ ಹೆಸರಿನಲ್ಲಿ ಶಾಲಾ ಆವರಣದಲ್ಲಿ ಭಾರತದ ಪರಂಪರೆ ಹಾಗೂ ಕರ್ನಾಟಕ ಸಂಸ್ಕೃತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಉತ್ಸವದಲ್ಲಿ ಪಾರಂಪರಿಕ ಉಡುಪಿನೊಂದಿಗೆ ಮಕ್ಕಳು ಕಂಗೊಳಿಸಲಿದ್ದಾರೆ. ಜಾನಪದ ಕಲಾತಂಡಗಳು ಮೆರುಗು ನೀಡಲಿವೆ. ಗುತ್ತಲ, ನೆಗಳೂರು, ಚೌಡಯ್ಯದಾನಪುರ, ಸುತ್ತಮುತ್ತಲಿನ ಶಾಲೆಗಳ ಮಕ್ಕಳು ಭಾಗವಹಿಸಲಿದ್ದಾರೆ.
ಉತ್ಸವದಲ್ಲಿ ನಾಲ್ಕು ವಿಷಯಗಳ ಮೇಲೆ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಕೃಷಿ, ಕರ್ನಾಟಕದ ಇತಿಹಾಸ ಮತ್ತು ಧಾರ್ಮಿಕತೆ, ಪರಿಸರ ಸಂರಕ್ಷಣೆ ಹಾಗೂ ಕರಕುಶಲ ವಸ್ತುಗಳ ಎಕ್ಸಿಬಿಷನ್ ನಡೆಯಲಿದೆ. ಗುರುಕುಲದ ಆಡಳಿತಾಧಿಕಾರಿ ಶಿವಾನಂದ ಮಠ ಅವರ ಪರಿಕಲ್ಪನೆಯಲ್ಲಿ ಉತ್ಸವ ನಡೆಯಲಿದೆ ಎಂದರು.
ಅಗಡಿಯ ಶ್ರೀ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶ್ರೀ ಗೌರಿಶಂಕರ ಮಾಗಾವಿ ಟ್ರಸ್ಟ್‌ನ ಅಧ್ಯಕ್ಷೆ ಹಾಗೂ ಶಾಲಾ ಸಂಸ್ಥಾಪಕ ಅಧ್ಯಕ್ಷೆ ರಶ್ಮಿ ಗೌರಿಶಂಕರ ಮಾಗಾವಿ ಅಧ್ಯಕ್ಷತೆ ವಹಿಸುವರು. ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಮಹೋತ್ಸವವನ್ನು ಉದ್ಘಾಟಿಸುವರು. ಸಾಹಿತಿ ಸತೀಶ ಕುಲಕರ್ಣಿ, ಡಾ.ಕಿರಣ ಮಾಗಾವಿ, ರಾಜೀವ ಮಾಗಾವಿ, ರಕ್ಷಿತಾ ಮಾಗಾವಿ, ಮಧುಮತಿ ಮಾಗಾವಿ, ಡಾ.ಗೀತಾ ಮಠ, ಮತ್ತಿತರರು ಭಾಗವಹಿಸುವರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಸಂಸ್ಥಾಪಕ ಅಧ್ಯಕ್ಷೆ ರಶ್ಮಿ ಮಾಗಾವಿ, ಆಡಳಿತಾಧಿಕಾರಿ ಶಿವಾನಂದ ಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net