

ಹಾವೇರಿ: ಗುತ್ತಲ ಪೊಲೀಸ್ ಠಾಣೆಯಲ್ಲಿ ಸೆ.7ರಂದು ದಾಖಲಾಗಿರುವ ಅಸಹಜ ಸಾವು (ಯುಡಿಆರ್) ಪ್ರಕರಣ ದಿನದಿಂದ ದಿನಕ್ಕೆ ಮತ್ತಷ್ಟು ತಿರುವು ಪಡೆಯುತ್ತಿದೆ. ಗುತ್ತಲ ಸರ್ಕಾರಿ ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳು ಇದೊಂದು ಅಸಹಜ ಸಾವಲ್ಲ ಎಂಬ ಆರೋಪಕ್ಕೆ ಇಂಬು ನೀಡುತ್ತಿವೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕು ಬಾಲೆಹೊಸೂರಿನ ಗೋವಿಂದಪ್ಪ ಪೂಜಾರ (35) ಸೆ.7ರಂದು ನಸುಕಿನ ಜಾವ ಮೃತಪಟ್ಟಿದ್ದ. ಸೆ.7ರಂದು ನಸುಕಿನ ಜಾವ 4.15ರ ಸುಮಾರು ಖಾಸಗಿ ವಾಹನದಲ್ಲಿ ಗೋವಿಂದಪ್ಪನನ್ನು ಗುತ್ತಲ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಜತೆಗೆ ಆತನ ಸಹೋದರಿ ಗೀತಾ ಕೂಡ ಇದ್ದರು. ವ್ಹೀಲ್ ಚೇರ್‌ನಲ್ಲಿ ಗೋವಿಂದನನ್ನು ಆಸ್ಪತ್ರೆ ಒಳಗೆ ಕರೆದೊಯ್ದರು. ನಂತರ ಆತ ಮೃತಪಟ್ಟಿದ್ದಾನೆಂದು ಹೇಳಿ, ಶವಾಗಾರಕ್ಕೆ ರವಾನಿಸುವಾಗಲೂ ಪೊಲೀಸರು ಇದ್ದ ದೃಶ್ಯ ಸೆರೆಯಾಗಿರುವುದು ಅನುಮಾನಗಳನ್ನು ಹುಟ್ಟಿಹಾಕಿದೆ.
ಸೆ.7ರಂದು ತಡರಾತ್ರಿ 2 ಗಂಟೆ ಸುಮಾರು ಹೊಸರಿತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗೋವಿಂದಪ್ಪನನ್ನು ಕರೆತರಲಾಗಿತ್ತು. ಆಗ ಆತನಿಗೆ ಪ್ರಜ್ಞೆ ಇರಲಿಲ್ಲ. ಅಲ್ಲಿಂದ ಗುತ್ತಲ ಆಸ್ಪತ್ರೆಗೆ ಬರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಹೊಸರಿತ್ತಿಯಿಂದ ಗುತ್ತಲ ತಲುಪಲು 11 ಕಿಮೀ ಹಾದಿಯನ್ನು ಸುಮಾರು 20 ನಿಮಿಷದಲ್ಲಿ ತಲುಪಬಹುದು. ಆದರೆ, 4.15ಕ್ಕೆ ಪೊಲೀಸರು ಗೋವಿಂದಪ್ಪನನ್ನು ಗುತ್ತಲ ಆಸ್ಪತ್ರೆಗೆ ಕರೆತಂದಿದ್ದಾರೆ. ಆ ಎರಡು ಗಂಟೆ ಆತನನ್ನು ಎಲ್ಲಿಗೆ ಕರೆದೊಯ್ಯಲಾಗಿತ್ತು ? ಬಾಲೆಹೊಸೂರಿನ ಮನೆಯಲ್ಲಿ ವಾಂತಿ ಮಾಡಿಕೊಂಡಿದ್ದವನನ್ನು ಪೊಲೀಸರು ಯಾಕೆ ಹೊಸರಿತ್ತಿ ಆಸ್ಪತ್ರೆಗೆ ಸೇರಿಸಿದರು ? ಈ ಎಲ್ಲ ಅನುಮಾನಗಳ ಬಗ್ಗೆ ಪೊಲೀಸ್ ಇಲಾಖೆ ಕಾನೂನು ಬದ್ಧ ತನಿಖೆ ನಡೆಸಬೇಕಿದೆ.