

ಹಾವೇರಿ: ಶಾಲಾ ಮಕ್ಕಳ ಪಠ್ಯಪುಸ್ತಕಗಳನ್ನು ಗೋಡೌನ್‌ಗೆ ಇಳಿಸಲು ಅಪ್ರಾಪ್ತ ಬಾಲಕರನ್ನು ಬಳಸಿಕೊಂಡಿರುವ ಘಟನೆ ನಗರದ ಗುರುಭವನದ ಬಳಿ ಇತ್ತೀಚೆಗೆ ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಕರ್ನಾಟಕ ಟೆಕ್ಸ್ಟ್‌ಬುಕ್ ಸೊಸೈಟಿ (ಕೆಟಿಬಿಎಸ್) ವತಿಯಿಂದ ಬೆಂಗಳೂರಿನಿಂದ ಲೋಡ್ ಮಾಡಿ ತಾಲೂಕಿನ ಉರ್ದು ಶಾಲೆಗಳಿಗೆ ಸರಬರಾಜು ಮಾಡಲು ಪಠ್ಯಪುಸ್ತಕಗಳನ್ನು ಕಳುಹಿಸಲಾಗಿತ್ತು. ಅವುಗಳನ್ನು ಗುರುಭವನದಲ್ಲಿ ಸಂಗ್ರಹಿಸುವಾಗ ಲಾರಿಯಿಂದ ಅನ್‌ಲೋಡ್ ಮಾಡಲು ಮಕ್ಕಳನ್ನು ಬಳಸಲಾಗಿತ್ತು. ಇದು ಬಾಲಕಾರ್ಮಿಕ ಕಾಯ್ದೆಯ ಉಲ್ಲಂಘನೆಯಾಗಿದ್ದು, ಇವರು ಶಾಲಾ ಮಕ್ಕಳೋ ಅಥವಾ ಯಾರು ಎಂಬ ಬಗ್ಗೆ ಬಹಿರಂಗವಾಗಬೇಕಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಪುಸ್ತಕಗಳನ್ನು ಇಳಿಸುವುದು ಗುತ್ತಿಗೆ ಪಡೆದ ಲಾರಿ ಮಾಲೀಕರು, ಚಾಲಕರಿಗೆ ಬಿಟ್ಟದ್ದು. ಆದರೂ ಮಕ್ಕಳನ್ನು ಬಳಸದಂತೆ ಈ ಹಿಂದೆಯೇ ಸೂಚಿಸಲಾಗಿತ್ತು ಎಂದು ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಎಸ್.ಆರ್.ಹಿರೇಮಠ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.