

ಹಾವೇರಿ: ಭಾರತೀಯ ಸಂಸ್ಕೃತಿ, ಆಚರಣೆಯಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಗುರು ಪೂರ್ಣಿಮೆ ಹುಣ್ಣಿಮೆಯಂದು ಗುರುವಾರ ಜಿಲ್ಲೆಯಾದ್ಯಂತ ವಿಶೇಷ ಪೂಜೆ, ಪುನಸ್ಕಾರ ಮಾಡುವ ಮೂಲಕ ಗುರುಗಳನ್ನು ಸ್ಮರಿಸಲಾಯಿತು.
ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆ, ಹೋಮ, ಹವನ ನೆರವೇರಿಸಲಾಯಿತು. ಗುರುಗಳ ಪಾದಪೂಜೆ, ಅನ್ನಪ್ರಸಾದ ವಿತರಣೆ, ರಕ್ತದಾನ, ಸೇರಿದಂತೆ ವಿವಿಧ ಕಾರ್ಯಕ್ರಮಗಳು ಸಡಗರದಿಂದ ಜರುಗಿದವು.
ಇಲ್ಲಿನ ಹಾನಗಲ್ಲ ರಸ್ತೆಯ ವೈಭವ ಲಕ್ಷ್ಮೀ ಪಾರ್ಕ್‌ನ ಶ್ರೀ ಸಾಯಿಬಾಬಾ, ಅಂಬಾಭವಾನಿ, ಗಣೇಶ ದೇವಸ್ಥಾನದಲ್ಲಿ ಗುರುಪೂರ್ಣಿಮೆ ನಿಮಿತ್ತ ಗುರುವಾರ ವಿವಿಧ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ರಕ್ತದಾನ ಜರುಗಿತು.
ಶ್ರೀ ಅಂಬಾಭವಾನಿ ದೇವಸ್ಥಾನ ಟ್ರಸ್ಟ್, ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಬಣ್ಣದ ಮಠದ ಶ್ರೀ ಅಭಿನವರುದ್ರ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ನಂತರ ಮಾತನಾಡಿದ ಶ್ರೀಗಳು, ಗುರು ಬಲದಿಂದ ಎಲ್ಲವನ್ನು ಪಡೆಯಲು ಸಾಧ್ಯವಿದೆ. ದೈವಕೃಪೆ ಎಲ್ಲರ ಮೇಲೆ ಇರಲು ಭಕ್ತಿ ಬಹಳ ಮುಖ್ಯ ಎಂದರು.
ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಮಾತನಾಡಿ, ಆರೋಗ್ಯವಾಗಿರುವ ವ್ಯಕ್ತಿಗಳು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಬೇಕು ಎಂದರು.
ಅಂಭಾಭವಾನಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಪ್ರಕಾಶ ಮುಂಜೋಜಿ, ಕುಮಾರ ಜಾಧವ, ದೇವರಾಜ ಗುಂಡೆ, ಚಂದ್ರಶೇಖರ ಜಾಧವ, ರಮೇಶ ಹುಲ್ಲೂರ, ಎನ್.ಆರ್.ಮಾಂಗ್ಲೇನವರ, ಮಾಲತೇಶ ದುಮ್ಮಾಳ, ಎಫ್.ಎಚ್.ವರದಿ, ಆರ್.ಸಿ.ಪಾಟೀಲ, ಪ್ರಕಾಶ ಪೂಜಾರ, ಶ್ರೀಪಾಧ ಭಟ್, ನಾಗರಾಜ ಭಟ್, ಈರಣ್ಣ ಚೌಡಣ್ಣನವರ, ಸಿದ್ದು ಹಿರಿಗಣ್ಣನವರ, ಪುಷ್ಪಾವತಿ ಸಜ್ಜನರ, ಇತರರಿದ್ದರು.