ಉಪನ್ಯಾಸಕರ ನೇಮಿಸಲು ಎಬಿವಿಪಿ ಆಗ್ರಹ; ಹಾವೇರಿ ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

23 HVR 2 B
Published on

ಹಾವೇರಿ: ಪದವಿ ಕಾಲೇಜ್‌ಗಳಲ್ಲಿ ಉಪನ್ಯಾಸಕರ ಕೊರತೆ ಹೆಚ್ಚಾಗಿದ್ದು, ಇದರಿಂದ ತರಗತಿಗಳಿಗೆ ತೊಂದರೆ ಆಗುತ್ತಿದೆ. ಈ ಕೂಡಲೇ ರಾಜ್ಯ ಸರ್ಕಾರ ಅಗತ್ಯಕ್ಕೆ ತಕ್ಕಷ್ಟು ಉಪನ್ಯಾಸಕರ ನೇಮಕ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ನಗರದ ವಾಲ್ಮೀಕಿ ವೃತ್ತದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು, ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ಹೊರಹಾಕಿದರು. ಕೆಲಕಾಲ ರಸ್ತೆ ಸಂಚಾರ ಬಂದ್ ಮಾಡಿದರು.

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ರಾಜ್ಯದಲ್ಲಿ ಪದವಿ ಕಾಲೇಜ್‌ನ ತರಗತಿಗಳು ಶುರುವಾಗಿ ತಿಂಗಳು ಕಳೆದಿದೆ. ಎಲ್ಲ ಕಾಲೇಜ್‌ಗಳಲ್ಲೂ ಉಪನ್ಯಾಸಕರ ಕೊರತೆ ಇರುವುದು ಸರ್ಕಾರಕ್ಕೆ ಕಾಣಿಸುತ್ತಿಲ್ಲ. ಅತಿಥಿ ಉಪನ್ಯಾಸಕರ ನೇಮಕಾತಿಯೂ ನಡೆದಿಲ್ಲ. ಇದು ವ್ಯಾಸಂಗದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾದರೆ ವಿದ್ಯಾರ್ಜನೆ ಹೇಗೆ ಮುಂದುವರಿಸುವುದು ಎಂದು ಪ್ರತಿಭಟನಕಾರರು ಕಿಡಿಕಾರಿದರು.

ಅತಿಥಿ ಉಪನ್ಯಾಸಕರನ್ನೇ ನಂಬಿಕೊಂಡಿದ್ದ ಕಾಲೇಜ್‌ಗಳಲ್ಲಿ ಹೆಚ್ಚಿನ ತೊಂದರೆಯಾಗಿದೆ. ಬಡ, ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಾಗಿ ಪದವಿ ಕಾಲೇಜ್‌ನಲ್ಲಿ ಓದುತ್ತಿದ್ದಾರೆ. ಉಪನ್ಯಾಸಕರು ಇಲ್ಲದ ಕಾರಣ, ತರಗತಿಗಳು ನಡೆಯುತ್ತಿಲ್ಲ. ವಿದ್ಯಾರ್ಥಿಗಳ ಓದಿಗೆ ಸಮಸ್ಯೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಉಳಿಯುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರ ತ್ವರಿತವಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಬೇಕಿತ್ತು. ಆದರೆ, ಇದುವರೆಗೂ ಪ್ರಕ್ರಿಯೆ ಆರಂಭಿಸಿಲ್ಲ. ಇದು ವಿದ್ಯಾರ್ಥಿ ವಿರೋಧಿ ನಡೆಯಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಸರ್ಕಾರ, ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮಂತ ಹಳ್ಳೂರ, ಸಾಗರ ಪೊಲೀಸಗೌಡ್ರ, ಕಾರ್ತಿಕ ಕಲಾಲ, ದರ್ಶನ ಎಂ.ಕೆ., ಈಶ್ವರಿ ಪಾಟೀಲ, ಅನುಷಾ ಇಜಾರಿ, ನೀಲಾಂಬಿಕಾ ಕೆ.ವಿ., ಇತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಶಾಶ್ವತ ಪರಿಹಾರ ಹುಡುಕಿ

ಉಪನ್ಯಾಸಕರ ಕೊರತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಸರ್ಕಾರಿ ಕಾಲೇಜ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ನೀಡಬೇಕು. ಪ್ರಯೋಗಾಲಯ, ಕಂಪ್ಯೂಟರ್ ಹಾಗೂ ಆಧುನಿಕ ಶಿಕ್ಷಣಕ್ಕೆ ತಕ್ಕಂತೆ ಉಪಕರಣಗಳನ್ನು ಒದಗಿಸಬೇಕು. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಬೇಕು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಖಾಲಿ ಇರುವ ಎಲ್ಲ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಮಾಡಬೇಕು. ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net