ಜಿಲ್ಲೆಯಲ್ಲಿ 2.47 ಗೃಹಲಕ್ಷ್ಮಿಯರ ನೋಂದಣಿ; ಅರ್ಜಿ ಸಲ್ಲಿಕೆಗೆ 536 ಕೇಂದ್ರಗಳು ಲಭ್ಯ; ಹಣ ಪಡೆದರೆ ಕಠಿಣ ಕ್ರಮ, ಡಿಸಿ ಎಚ್ಚರಿಕೆ

Gruhalakshmi
Published on

ಹಾವೇರಿ: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಲ್ಲಿ ಈವರೆಗೆ 2,47,362 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ನೋಂದಣಿಗಾಗಿ ಜಿಲ್ಲೆಯಲ್ಲಿ 223 ಬಾಪೂಜಿ ಸೇವಾಕೇಂದ್ರ, 267 ಗ್ರಾಮ ಒನ್, 19 ಕರ್ನಾಟಕ ಒನ್ ಹಾಗೂ 27 ಹೆಚ್ಚುವರಿ ಕೇಂದ್ರಗಳು ಸೇರಿ ಒಟ್ಟು 536 ಕೇಂದ್ರಗಳನ್ನು ಆರಂಭಿಸಲಾಗಿದೆ. ನೋಂದಣಿಗೆ ಹಣ ಪಡೆಯುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಫಲಾನುಭವಿಗಳ ನೋಂದಣಿಗೆ ಪಡಿತರ ಚೀಟಿಯಲ್ಲಿ ಈಗಾಗಲೇ ಗುರುತಿಸಲಾದ ಯಜಮಾನಿ ಮಹಿಳೆ ಅರ್ಹರಿರುತ್ತಾರೆ. ಈ ಯೋಜನೆಯಡಿ ಫಲಾನುಭವಿಯ ನೋಂದಣಿ ಸಂಪೂರ್ಣ ಉಚಿತವಾಗಿದ್ದು, ಯಾರಿಗೂ ಯಾವುದೇ ಶುಲ್ಕ ಪಾವತಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜು.20ರಿಂದ ಈವರೆಗೆ 2,47,362 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಹಾವೇರಿ ತಾಲೂಕಿನ 23,413, ಹಾನಗಲ್ಲ ತಾಲೂಕಿನಲ್ಲಿ 41,371, ಹಾವೇರಿ ತಾಲೂಕಿನಲ್ಲಿ 42,992, ಹಿರೇಕೆರೂರ ತಾಲೂಕಿನಲ್ಲಿ 19,918, ರಾಣೇಬೆನ್ನೂರ ತಾಲೂಕಿನಲ್ಲಿ 44,778, ರಟ್ಟಿಹಳ್ಳಿ ತಾಲೂಕಿನಲ್ಲಿ 19,752, ಸವಣೂರ ತಾಲೂಕಿನಲ್ಲಿ 24,881 ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ 30,257 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ.
ಯಾವುದೇ ಕೇಂದ್ರಗಳಲ್ಲಿ ಶುಲ್ಕ ವಸೂಲಿ ಮಾಡುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಿಸಿದ ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಅಥವಾ ಪುರಸಭೆ ಹಾಗೂ ನಗರಸಭೆ ಪೌರಾಯುಕ್ತರಿಗೆ ತಿಳಿಸಬೇಕು ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಲುಸ್ತುವಾರಿ ಅಧಿಕಾರಿಗಳ ನಿಯೋಜನೆ:
ಗೃಹಲಕ್ಷ್ಮೀ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ನೋಂದಣಿ ಕೇಂದ್ರವಾರು ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ನಗರ ಪ್ರದೇಶದ ವ್ಯಾಪ್ತಿಗೆ ಆಯಾ ತಾಲೂಕಾ ತಹಸೀಲ್ದಾರ್ ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಗೆ ಆಯಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಗ್ರಾಮೀಣ ಪ್ರದೇಶ ವ್ಯಾಪ್ತಿಗೆ ಹೆಚ್ಚುವರಿಯಾಗಿ ಸಹಾಯಕ ನೋಡಲ್ ಅಧಿಕಾರಿಗಳನ್ನಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲಿದೆ ಎಂದು ಡಿಸಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net