

ಕೇಶವಮೂರ್ತಿ ವಿ.ಬಿ. ಹಾವೇರಿ
ಶಿಗ್ಗಾಂವಿ ವಿಧಾನಸಭೆ ಉಪಚುನಾವಣೆ ವೇಳೆ ಮತದಾನಕ್ಕೂ ಮೊದಲೇ ಮಹಿಳೆಯರ ಖಾತೆಗಳಿಗೆ ತಲಾ 2,000 ರೂ. ಜಮೆ ಮಾಡಿದ್ದ ರಾಜ್ಯ ಸರ್ಕಾರ, ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಗೃಹಲಕ್ಷ್ಮೀಯರನ್ನೇ ಮರೆತುಬಿಟ್ಟಿದೆ. ಮೂರು ತಿಂಗಳ 228 ಕೋಟಿ ರೂ. ಬಾಕಿ ಹಣಕ್ಕಾಗಿ ಮಹಿಳೆಯರು ಕಾದು ಕಾದು ಸುಸ್ತಾಗಿದ್ದಾರೆ.
2024ರ ನವೆಂಬರ್ 13ರಂದು ಶಿಗ್ಗಾಂವಿ ಉಪ ಚುನಾವಣೆ ಮತದಾನದ ದಿನಾಂಕ ನಿಗಧಿಪಡಿಸಲಾಗಿತ್ತು. ನೀತಿಸಂಹಿತೆಯನ್ನೂ ಲೆಕ್ಕಿಸದೇ ಮತದಾನದ ಹಿಂದಿನ ದಿನ ನವೆಂಬರ್ 12ರಂದು ಅಕ್ಟೋಬರ್ 2024ರ ಕಂತಿನ ಹಣ 76.14 ಕೋಟಿ ರೂ.ಯನ್ನು ರಾಜ್ಯ ಸರ್ಕಾರ ಜಮೆ ಮಾಡುವ ಮೂಲಕ ಮಹಿಳಾ ಮಣಿಗಳ ಮನ ಗೆಲ್ಲಲು ಪ್ರಯತ್ನಿಸಿತ್ತು. ಉಪಚುನಾವಣೆ ಮುಗಿಯಿತು. ಕಾಂಗ್ರೆಸ್ ಅಭ್ಯರ್ಥಿಯೇ ಗೆಲುವು ಸಾಧಿಸಿದರು. ಆದರೆ, ಚುನಾವಣೆ ಮುಗಿದು ನಾಲ್ಕು ತಿಂಗಳಾದರೂ ಗೃಹಲಕ್ಷ್ಮಿಯರತ್ತ ನೋಡದೇ ಸರ್ಕಾರ ಗಪ್‌ಚುಪ್ ಆಗಿಬಿಟ್ಟಿದೆ.
ಜಿಲ್ಲೆಯಲ್ಲಿ 38,07,10 ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಇದ್ದಾರೆ. ಪ್ರತಿ ತಿಂಗಳು ಇವರ ಖಾತೆಗಳಿಗೆ ಸುಮಾರು 76 ಕೋಟಿ ರೂ. ಹಣ ಸಂದಾಯವಾಗಬೇಕು. ಸದ್ಯ ನವೆಂಬರ್, ಡಿಸೆಂಬರ್ ಹಾಗೂ ಜನವರಿವರೆಗಿನ ಮೂರು ತಿಂಗಳ ಅಂದಾಜು 228 ಕೋಟಿ ರೂ.ಗಾಗಿ ಜಿಲ್ಲೆಯ ಫಲಾನುಭವಿಗಳು ಕಾಯುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಒದ್ದಾಡುತ್ತಿರುವ ಸರ್ಕಾರ, ಈ ಹಿಂದೆ ಜಿಎಸ್‌ಟಿ ಸಂಖ್ಯೆ ಹೊಂದಿರುವ, ಆದಾಯ ತೆರಿಗೆ (ಐಟಿ) ಪಾವತಿಸುವ ಹಾಗೂ ಐಟಿ ರಿಟರ್ನ್ ಸಲ್ಲಿಸುವ ನೆಪದಲ್ಲಿ 919 ಗೃಹಲಕ್ಷ್ಮೀ ಫಲಾನುಭವಿಗಳನ್ನು ಕೈಬಿಟ್ಟಿತ್ತು. ಇದೀಗ ಅಧಿಕೃತವಾಗಿ ಅರ್ಹ ಫಲಾನುಭವಿಗಳಿಗೆ ಹಣ ಪಾವತಿಸಲು ಚೌಕಾಶಿ ಮಾಡುತ್ತಿದೆ.
ಸಂಕಷ್ಟದಲ್ಲಿ ಸಾಲ ಮಾಡಿದವರು
ಗೃಹಲಕ್ಷ್ಮೀ ಹಣ ಕೂಡಿಟ್ಟು ರೆಫ್ರಿಜರೇಟ್, ರೂಟಾವೇಟರ್, ಹೊಲಿಗೆ ಮಷಿನ್, ಇತರ ವಸ್ತುಗಳನ್ನು ಖರೀದಿಸಿ ಹಲವು ಮಹಿಳೆಯರು ಸಂತಸಪಟ್ಟಿದ್ದಾರೆ. ಹಲವರು ಆ ಹಣದಲ್ಲೇ ಶಾಲೆಗಳಿಗೆ ದೇಣಿಗೆ ಕೊಟ್ಟಿದ್ದಾರೆ. ಆದರೆ, ಇದೇ ಹಣವನ್ನು ನಂಬಿ ಸಾವಿರಾರು ಮಹಿಳೆಯರು ಸಾಲವನ್ನೂ ಮಾಡಿದ್ದಾರೆ ಎಂದರೆ ನಂಬಲೇಬೇಕು. ಮೂರು ಹೊತ್ತಿನ ಊಟಕ್ಕೂ ಪರದಾಡುವ ಅದೆಷ್ಟೋ ಮಹಿಳೆಯರು ತಮ್ಮ ಕುಟುಂಬಕ್ಕಾಗಿ ಗೃಹಲಕ್ಷ್ಮೀ ಯೋಜನೆಯ ಹಣವನ್ನೇ ನಂಬಿ ಮೈಕ್ರೋ ಫೈನಾನ್ಸ್, ಮಹಿಳಾ ಸಂಘಗಳಲ್ಲಿ ಕಿರುಸಾಲ ಮಾಡಿಕೊಂಡಿದ್ದಾರೆ. ಮೂರು ತಿಂಗಳಿಂದ ಈ ಹಣವೂ ಕೈಸೇರದೇ ಒದ್ದಾಡುತ್ತಿದ್ದಾರೆ.
ಕೋಟ್:
ಮೂರು ತಿಂಗಳಿಂದ ಹಾಕುತ್ತೇವೆ ಹಾಕುತ್ತೇವೆ ಅಂದರೂ ಬರುತ್ತಿಲ್ಲ. ಮಕ್ಕಳ ಶಿಕ್ಷಣ, ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಹಲವರು ಇಎಂಐ ಕಟ್ಟಲಾಗದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ.
- ಸಾವಿತ್ರಿ ಎಂ. ರತ್ನಾಕರ, ಫಲಾನುಭವಿ, ಹಂಸಭಾವಿ
ಕೋಟ್:
ಜಿಲ್ಲೆಯಲ್ಲಿ 3.80 ಲಕ್ಷ ಫಲಾನುಭವಿಗಳಿದ್ದು, ಮೂರು ತಿಂಗಳ ಗೃಹಲಕ್ಷ್ಮೀ ಹಣ ಬಾಕಿ ಉಳಿದಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದ್ದು, ವಾರದೊಳಗೆ ಹಣ ಸಂದಾಯವಾಗುವ ಸಾಧ್ಯತೆ ಇದೆ.
- ಶ್ರೀನಿವಾಸ ಆಲದಾರ್ತಿ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
- ಜಿಲ್ಲೆಯ ಫಲಾನುಭವಿಗಳು- 3.80 ಲಕ್ಷ
- ಪ್ರತಿ ತಿಂಗಳು ಜಿಲ್ಲೆಗೆ ಬರಬೇಕಾದ ಹಣ- 76 ಕೋಟಿ
- ಮೂರು ತಿಂಗಳ ಬಾಕಿ ಹಣ- 228 ಕೋಟಿ
- ಪಾವತಿಯಾದ ಕೊನೆಯ ತಿಂಗಳು- ಅಕ್ಟೋಬರ್ 2024