919 ಮಹಿಳೆಯರಿಂದ ದೂರವಾದ ಗೃಹಲಕ್ಷ್ಮೀ ! ; ಜಿಎಸ್‌ಟಿ, ಐಟಿ ಪಾವತಿಸದವರಿಗೂ ಕೊಕ್; 2 ಸಾವಿರ ಬಂದ್ ಹಿನ್ನೆಲೆ ಸ್ತ್ರೀಯರಲ್ಲಿ ಮೂಡಿದ ಬೇಸರ

31 Gruhalaksmi Logo
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಬಂದ್ ಮಾಡುತ್ತದೆ ಎಂಬ ವಿರೋಧ ಪಕ್ಷಗಳ ಹೇಳಿಕೆಗಳ ಬೆನ್ನಲ್ಲೇ ಜಿಎಸ್‌ಟಿ, ಐಟಿ ರಿಟರ್ನ್ ಸಲ್ಲಿಸುವ ಮಹಿಳೆಯರನ್ನು ಗೃಹಲಕ್ಷ್ಮೀ ಯೋಜನೆಯಿಂದ ಕೈಬಿಡಲಾಗುತ್ತಿದೆ. ಇದೇ ನೆಪವೊಡ್ಡಿ ಜಿಲ್ಲೆಯ 919 ಮಹಿಳೆಯರಿಂದ ಈಗಾಗಲೇ ಗೃಹಲಕ್ಷ್ಮೀ ದೂರವಾಗಿದ್ದಾಳೆ.
ಜಿಎಸ್‌ಟಿ ಸಂಖ್ಯೆ ಹೊಂದಿರುವ, ಆದಾಯ ತೆರಿಗೆ (ಐಟಿ) ಪಾವತಿಸುವ ಹಾಗೂ ಐಟಿ ರಿಟರ್ನ್ ಸಲ್ಲಿಸುವ 919 ಮಹಿಳೆಯರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆಯಿಂದ ಕೈಬಿಟ್ಟಿದೆ. ಇದರಲ್ಲಿ ಜಿಎಸ್‌ಟಿ ಸಂಖ್ಯೆ ಹೊಂದಿರದ ಹಾಗೂ ಐಟಿ ರಿಟರ್ನ್ ಕೂಡ ಸಲ್ಲಿಸದ ಹಲವು ಮಹಿಳೆಯರೂ ಇದ್ದಾರೆ. ಕೆಲವರು ಸಾಲ ಪಡೆದ ಹಿನ್ನೆಲೆಯಲ್ಲಿ ಐಟಿ ರಿಟರ್ನ್ ಸಲ್ಲಿಸಿದವರು ಇದ್ದಾರೆ. ಆದರೂ ನಮ್ಮನ್ನು ಏಕೆ ಯೋಜನೆಯಿಂದ ಕೈಬಿಡಲಾಗಿದೆ ಎಂಬುದು ಗೃಹಲಕ್ಷ್ಮಿಯರ ಪ್ರಶ್ನೆಯಾಗಿದೆ.
ಜಾತಿ, ಧರ್ಮ, ಮೇಲು ಕೀಳು ನೋಡದೇ ಎಲ್ಲ ಮಹಿಳೆಯರಿಗೂ ಸಮಾನವಾಗಿ ಪ್ರತಿ ತಿಂಗಳು 2,000 ರೂ. ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಆರಂಭದಲ್ಲಿ ಹಾಗೆಯೇ ಎಲ್ಲರಿಗೂ ತಲುಪಿಸಿದ್ದರು. ಆದರೆ, ನಂತರದಲ್ಲಿ ಏಕಾಏಕಿ 919 ಮಹಿಳೆಯರನ್ನು ಕೈಬಿಟ್ಟಿರುವುದು ಈ ಮಹಿಳೆಯರಲ್ಲಿ ಬೇಸರ ಮೂಡಿಸಿದೆ.
ತಾಲೂಕಿನ ಕಿತ್ತೂರ ಗ್ರಾಮದ ಕವಿತಾ ಮೇಲ್ಮುರಿ ಎಂಬುವರು ಜಿಎಸ್‌ಟಿ ನಂಬರ್ ಹೊಂದಿಲ್ಲ. ಐಟಿ ರಿಟರ್ನ್ ಕೂಡ ಮಾಡುವುದಿಲ್ಲ. ಆದರೂ ಇವರನ್ನು ಯೋಜನೆಯಿಂದ ಬಿಡಲಾಗಿದೆ. ಹೀಗೆ ಪ್ರತಿ ತಿಂಗಳು 2 ಸಾವಿರ ಬರುತ್ತದೆ ಎಂದು ಸಂತಸಪಟ್ಟಿದ್ದ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಮಹಿಳೆಯರಿಗೆ ಸರ್ಕಾರ ಶಾಕ್ ನೀಡಿದೆ. ಇದರಲ್ಲಿ ಹಲವರಿಗೆ ಕೇವಲ ಎರಡು, ಮೂರು ತಿಂಗಳು ಮಾತ್ರ 2 ಸಾವಿರ ದೊರೆತಿದೆ. ನಂತರ ಏಕಾಏಕಿ ಬಂದ್ ಮಾಡಲಾಗಿದೆ.
919 ಮಹಿಳೆರಲ್ಲಿ ಜಿಎಸ್‌ಟಿ, ಐಟಿ ಪಾವತಿಸದ, ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಮಹಿಳೆಯರೂ ಇದ್ದಾರೆ. ಏಕಾಏಕಿ ಹಣ ಬಂದ್ ಆದ ಹಿನ್ನೆಲೆಯಲ್ಲಿ ಅವರು ಕುಗ್ಗಿದ್ದಾರೆ. ಈ ಬಗ್ಗೆ ಸರ್ಕಾರ ಪರಿಶೀಲಿಸಿ, ಅರ್ಹರಿಗೆ ಯೋಜನೆಯ ಲಾಭ ಆಗುವಂತೆ ದಿಟ್ಟ ಕ್ರಮ ಕೈಗೊಳ್ಳಬೇಕಿದೆ.
ಫಲಾನುಭವಿಗಳಲ್ಲಿ ಆತಂಕ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು. ಇದೀಗ ಹಲವರನ್ನು ಕೈಬಿಟ್ಟಿರುವುದು ಉಳಿದ ಫಲಾನುಭವಿಗಳಲ್ಲಿ ಆತಂಕ ಮೂಡಿಸಿದೆ.

ಕೋಟ್:
ಯಾರು ಸಶಕ್ತರಿದ್ದಾರೆ ಅವರು ಯೋಜನೆಯ ಹಣ ತೆಗೆದುಕೊಳ್ಳಬಾರದು. ಅರ್ಹರಿಗೆ ಯೋಜನೆ ತಲುಪಬೇಕು. ಅನುಕೂಲ ಇರುವವರು ಕೇಂದ್ರದ ಗ್ಯಾಸ್ ಸಬ್ಸಿಡಿ ವಾಪಸ್ ಕೊಟ್ಟಂತೆ ಈ ಯೋಜನೆಗಳನ್ನು ಬಿಟ್ಟುಕೊಡಲಿ. ಜಿಎಸ್‌ಟಿ ನಂಬರ್ ಇರುವ ಹಾಗೂ ಐಟಿ ರಿಟರ್ನ್ ಸಲ್ಲಿಸುವ, ಸಲ್ಲಿಸದವರ ಹೆಸರು ಕೈಬಿಟ್ಟಿರುವ ಕುರಿತು ಪರಿಶೀಲಿಸಲಾಗುವುದು.
> ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಕೋಟ್:
ನಮ್ಮ ಸಂಬಂಧಿಯೊಬ್ಬರು ಐಟಿ ರಿಟರ್ನ್ ಮಾಡುತ್ತಿಲ್ಲ. ಅವರ ಬಳಿ ಬಿಪಿಎಲ್ ಕಾರ್ಡ್ ಇದೆ. ಅವರದ್ದು ಬಡ ಕುಟುಂಬ. ಆದರೂ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕು.
> ಪ್ರವೀಣ ಮೂಲಿಮನಿ, ಹಾವೇರಿ ನಿವಾಸಿ

ಕೋಟ್:
ಸಾಲ ಪಡೆದ ಕಾರಣ ಐಟಿ ರಿಟರ್ನ್ ಸಲ್ಲಿಸಿರುವವರ ಹೆಸರು ಬಿಟ್ಟು ಹೋಗಿದ್ದು ಅಂಥವರ ಹೆಸರು ಪಟ್ಟಿಯಲ್ಲಿ ಸೇರಿಸಲು ಸರ್ಕಾರಕ್ಕೆ ಕೋರಲಾಗಿದೆ. ಐಟಿ ರಿಟರ್ನ್ ಸಲ್ಲಿಕೆ ಮಾಡದವರ ಹೆಸರುಗಳೂ ಬಿಟ್ಟು ಹೋಗಿರುವ ಕುರಿತು ಪರಿಶೀಲಿಸಲಾಗುವುದು.
> ಶ್ರೀನಿವಾಸ ಆಲದರ್ತಿ, ಡಿಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

  • ಕಿಕರ್ ಒಪಾಯಿಂಟ್
  • ಜಿಲ್ಲೆಯ ಫಲಾನುಭವಿಗಳು- 3.55 ಲಕ್ಷ
  • ಈವರೆಗೆ 780 ಕೋಟಿ ರೂ. ಜಮೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net